ನವದೆಹಲಿ:ಚೀನಾದ ವುಹಾನ್ ನಲ್ಲಿ ಹುಟ್ಟಿದ ಭೀಕರ ಕೊರೊನಾ ವೈರಸ್ ಈಗಾಗಲೇ 210 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸುಮಾರು 1,50,000 ಜೀವಗಳನ್ನು ಆಪೋಶನ ತೆಗೆದುಕೊಂಡಿದೆ. ಒಂದೆಡೆ ಇದು ಎಲ್ಲಿಗೆ ಕೊನೆಯಾಗುತ್ತದೆ ಎಂಬುದು ಅರಿವಿಗೆ ಬರುತ್ತಿಲ್ಲ. ಮತ್ತೊಂದೆಡೆ ಲಸಿಕೆ ಅಥವಾ ಚಿಕಿತ್ಸೆಯ ಮಾರ್ಗಗಳು ಕೂಡ ಗೋಚರಿಸುತ್ತಿಲ್ಲ. ಮಸುಕಾದ ಹಾದಿಯನ್ನೇ ಅನುಸರಿಸಿ ಪ್ರತಿಯೊಂದು ರಾಷ್ಟ್ರವೂ ಪ್ರಾಯೋಗಿಕವಾಗಿ ಪರಿಹಾರ ಹುಡುಕುತ್ತಿವೆ. ಇಸ್ರೇಲ್, ಕೊರಿಯಾ, ಜರ್ಮನಿ, ಭಾರತ, ಸಿಂಗಾಪುರ ಮತ್ತು ಜಪಾನ್ ರೀತಿಯ ಕೆಲವು ದೇಶಗಳು ಸ್ಫೂರ್ತಿದಾಯಕ ರೀತಿಯಲ್ಲಿ ಪೂರ್ವಭಾವಿಯಾಗಿಯೇ ಸಾಂಕ್ರಾಮಿಕ ರೋಗ ನಿಭಾಯಿಸುತ್ತಿವೆ. ನಿಗೂಢವಾಗಿ ಶ್ರೀಮಂತ ಜಿ 7 ರಾಷ್ಟ್ರಗಳು ಹೆಚ್ಚು ಹಾನಿಗೆ ಒಳಗಾಗಿವೆ. ಕೆಲವು ದಿನಗಳಲ್ಲಿ ಅಮೆರಿಕ ಒಂದರಲ್ಲಿಯೇ ಸಾವಿನ ಸಂಖ್ಯೆ 2000ದ ಆಸುಪಾಸಿಗೆ ತಲುಪಿದೆ.
ಚೀನಾದಲ್ಲಿ ಮಾರಕ ವೈರಸ್‌ಗಳು ಹುಟ್ಟಿಕೊಂಡಿರುವುದು ಇದು ಮೊದಲೇನೂ ಅಲ್ಲ. ಚೀನಾ ವಿಷಯಗಳನ್ನು ಮುಚ್ಚಿಹಾಕುವುದು ಅಸಾಮಾನ್ಯ ಸಂಗತಿ ಏನೂ ಅಲ್ಲ. ಹೊಸತು ಎಂಬುದು ಏನಾದರೂ ಇದ್ದರೆ ಅದು ಯಾವುದೇ ಜವಾಬ್ದಾರಿಯನ್ನು ನಿರಾಕರಿಸುವ ಮತ್ತು ತನಗೆ ಉತ್ತಮ ನಡವಳಿಕೆ ಪ್ರಮಾಣಪತ್ರ ನೀಡುವಂತೆ ಡಬ್ಲ್ಯೂ ಎಚ್ ಒ (ವಿಶ್ವ ಆರೋಗ್ಯ ಸಂಸ್ಥೆ) ಯನ್ನು ಮನವೊಲಿಸುವ ಚೀನಾದ ಧೈರ್ಯ. ಆದರೆ, ಬೀಜಿಂಗ್ ಕೋವಿಡ್- 19 ಟೈಮ್- ಬಾಂಬ್ ಇಡುವಾಗ, ಆ ಕುರಿತು ಒಂದು ಸ್ವಲ್ಪವೂ ಅರಿಯದ ಉಳಿದ ಜಗತ್ತು ತನ್ನ ದೈನಂದಿನ ಕಾರ್ಯಗಳಲ್ಲಿ ಮುಳುಗಿತ್ತು. ಆದರೆ ಒಂದು ಒಳ್ಳೆ ದಿನ ಅದು ಅರಿವಿಗೆ ಬರುವ ಹೊತ್ತಿಗೆ ಆ ಸಾಂಕ್ರಾಮಿಕ ಪಿಡುಗು ನಮ್ಮ ನಗರ ಪಟ್ಟಣಗಳಿಗೂ ಹಬ್ಬಿತ್ತು.
ಆಘಾತಕಾರಿ ಸಂಗತಿ ಎಂದರೆ ಅದೃಷ್ಟಹೀನ ಪ್ರಪಂಚ ತನ್ನ ನಾಶದ ಮೂಕ ಪ್ರೇಕ್ಷಕನಾಗಿ ನಿಲ್ಲಲು ಹೊರಟಿದೆ. ನಿರ್ಣಾಯಕ ಔಷಧೀಯ ಉತ್ಪನ್ನಗಳೂ ಸೇರಿದಂತೆ, ಇದ್ದಕ್ಕಿದ್ದ ಹಾಗೆಯೇ ಚೀನಾದಿಂದ ಉತ್ಪಾದನಾ ಸೌಲಭ್ಯಗಳನ್ನು ಅರಸುವ ಮಹಾ ಹೆಡ್ಡತನಕ್ಕೆ ಅದು ಮುಂದಾಗಿದೆ. ಆಮದು ಅವಲಂಬನೆ ಕುರಿತಂತೆ (ಚೀನಾದಿಂದ ಬಹುಪಾಲು) ಇದು ಪಾಶ್ಚಾತ್ಯ ದೇಶಗಳ ನಿಲುವಿನ ಮೇಲೆ ಬೆಳಕು ಚೆಲ್ಲುತ್ತದೆ. ಆ ದೇಶಗಳ ಅವಶ್ಯಕತೆಯ ಶೇ 95ರವರೆಗೆ ಆಮದು ಅವಲಂಬನೆ ವಿಸ್ತರಿಸುತ್ತದೆ ಎಂಬುದನ್ನು ಇದರಿಂದ ಅರಿಯಬಹುದು. ಪರಿಣಾಮ ಆ ದೇಶಗಳು ಮುಖಗವಸು, ಕೈಗವಸು ಮತ್ತು ವೆಂಟಿಲೇಟರ್‌ಗಳ ಕೊರತೆಯನ್ನಷ್ಟೇ ಅಲ್ಲ, ಪ್ಯಾರೆಸಿಟಮಾಲ್ ರೀತಿಯ ಮೂಲಭೂತ ಔಷಧಿಯ ಕೊರತೆಯನ್ನೂ ಎದುರಿಸುತ್ತಿವೆ.
ಸಾಂಕ್ರಾಮಿಕ ಪಿಡುಗಿಗೆ ತುತ್ತಾದ ದೇಶಗಳು ನೂರಾರು ದಶಲಕ್ಷ ಡಾಲರ್ ಮೊತ್ತದ ಸರಕನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದವು. ಆದರೆ ಚೀನಾದ ಅನೇಕ ನಿರ್ಲಜ್ಜ ಕಂಪನಿಗಳು, ಆ ದೇಶಗಳಿಗೆ ಗುಣಮಟ್ಟದ್ದೇ ಇರಲಿ ಅಥವಾ ದೋಷಯುಕ್ತವೇ ಆಗಿರಲಿ ಅಂತಹ ಪರೀಕ್ಷಾ ಕಿಟ್‌ಗಳು, ಕೈಗವಸುಗಳು ಮತ್ತು ಸಂಬಂಧಿತ ವಸ್ತುಗಳನ್ನು ಒದಗಿಸುವ ಗೋಜಿಗೂ ಹೋಗಲಿಲ್ಲ ಎಂದು ತಿಳಿದುಬಂದಿದೆ. .
"ಅಮೆರಿಕದ ಹೆಚ್ಚಿನ ಮುಖಗವಸುಗಳು ಚೀನಾದಲ್ಲಿ ಉತ್ಪತ್ತಿ ಆಗುತ್ತವೆ. ರಾಜತಾಂತ್ರಿಕ ಹತೋಟಿ ಎಂಬ ಹೆಸರಿನಲ್ಲಿ ಸಂಚಾರ ನಿಷೇಧ ಹೇರುವ ಮೂಲಕ ಅಮೆರಿಕ ವಿರುದ್ಧ ಚೀನಾ ಪ್ರತೀಕಾರ ಕೈಗೊಂಡರೆ ಆಗ ಅಮೆರಿಕ ಹೊಸ ನ್ಯುಮೋನಿಯಾ ಸಾಂಕ್ರಾಮಿಕದ ಸುಳಿಗೆ ಸಿಲುಕುತ್ತದೆ. ಹಾಗೆ ಆಗದಿರಲು ಅಮೆರಿಕ ಚೀನಾದ ಕ್ಷಮೆ ಯಾಚಿಸಬೇಕಾಗುತ್ತದೆ ಮತ್ತು ಇಡೀ ಜಗತ್ತು ಚೀನಾಕ್ಕೆ ಕೃತಜ್ಞವಾಗಿ ಇರಬೇಕಾಗುತ್ತದೆ” ಎಂಬ ಅನಾಹುತಕಾರಿ ಸುಳಿವನ್ನು ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನ್ ಹುವಾ ಮಾರ್ಚ್ 4ರಂದು ಬಿಟ್ಟುಕೊಟ್ಟಿದೆ.
ಹಾಗಾದರೆ, ಸದ್ಯದ ಪರಿಸ್ಥಿತಿ ಏನು? ಬಯಸದೇ ಇದ್ದ ಮಾನವ ಬಲಿಯ ಜೊತೆಗೆ ಎಲ್ಲ ಖಂಡಗಳಲ್ಲಿರುವ ದೇಶಗಳು ಹೀನಾಯ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿವೆ. ಜಾಗತಿಕ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ, ಕಾರ್ಖಾನೆಗಳು ಸ್ಥಗಿತಗೊಳ್ಳುತ್ತಿವೆ, ನಿರುದ್ಯೋಗ ಹೆಚ್ಚುತ್ತಿದೆ (ಮಾರ್ಚ್ ಮಧ್ಯದಿಂದ ಅಮೆರಿಕದಲ್ಲಿ 22 ದಶಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ) ಮತ್ತು ಅಗತ್ಯ ವಸ್ತುಗಳ ಕೊರತೆ ಎಂಬುದು ಸಾಮಾನ್ಯ ಸಂಗತಿ ಆಗುತ್ತಿದೆ. ಒ ಇ ಸಿ ಡಿ ಯ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ಮುಖ್ಯ ಅರ್ಥಶಾಸ್ತ್ರಜ್ಞರು "ಎಲ್ಲಾ ಒ ಇ ಸಿ ಡಿ ದೇಶಗಳಲ್ಲಿ ಉತ್ಪಾದನಾ ಮಟ್ಟ ಶೇ 25 ರಿಂದ 30ರಷ್ಟು ಕುಸಿದಿದೆ” ಎಂದು ಹೇಳುತ್ತಾರೆ.
ಕಚ್ಚಾ ತೈಲ ಬೆಲೆ ಶೇ 70ರಷ್ಟು ಕುಸಿದಿದೆ (ಭಾರತ ದೂರುತ್ತಿಲ್ಲ!). 1.57 ಶತಕೋಟಿ ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆತಿಥ್ಯ, ಪ್ರವಾಸೋದ್ಯಮ, ವಾಯುಯಾನ ಮತ್ತು ನಿರ್ಮಾಣ ಕ್ಷೇತ್ರಗಳು ದೊಡ್ಡ ಹೊಡೆತ ಅನುಭವಿಸುತ್ತಿವೆ. ಅವುಗಳ ಚೇತರಿಕೆ ತ್ವರಿತವೂ ಆಗಿರದು ಅಥವಾ ಯಾತನಾರಹಿತವೂ ಆಗದೆ ಇರದು.
ಐ ಎಂ ಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಅಂದಾಜಿನ ಪ್ರಕಾರ ಈ ವರ್ಷ ಜಾಗತಿಕ ಆರ್ಥಿಕತೆಯು ಶೇ 3ರಷ್ಟು ಸಂಕುಚಿತಗೊಳ್ಳುತ್ತದೆ, ಇದು 1930 ರ ಮಹಾ ಆರ್ಥಿಕ ಕುಸಿತದ ನಂತರದ ಅತಿ ಕೆಟ್ಟ ಸ್ಥಿತಿ ಆಗಿದೆ. ಇದು ಮುಂದಿನ ಎರಡು ವರ್ಷಗಳಲ್ಲಿ 9 ಟ್ರಿಲಿಯನ್ ಕೋಟಿ ಜಾಗತಿಕ ಜಿಡಿಪಿಯನ್ನು (ಡಾಲರ್ 87 ಟ್ರಿಲಿಯನ್) ಕಡಿತಗೊಳಿಸಬಹುದು. ಚೀನಾದ ಆರ್ಥಿಕತೆಯು ಕೇವಲ ಶೇ 1.2 (1976 ರಿಂದ ನಿಧಾನ) ಮತ್ತು ಭಾರತದ್ದು ಶೇ 1.5ರಷ್ಟು ವಿಸ್ತರಣೆ ಆಗಬಹುದು.