ಮುಂಬೈ (ಮಹಾರಾಷ್ಟ್ರ) : ರಾಜಸ್ಥಾನದಲ್ಲಿ ಸರ್ಕಾರವನ್ನು ಉರುಳಿಸಲು ವಿಫಲ ಪ್ರಯತ್ನ ನಡೆಸಿದ ಬಳಿಕ ಮಹಾರಾಷ್ಟ್ರದ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಡಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಬಯಸುತ್ತಿದೆ ಎಂದು ಶಿವಸೇನೆ ಆರೋಪಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಶೀವಸೇನೆ ತನ್ನ ಚಿಂತನೆಗಳೊಂದಿಗೆ ವಿರೋಧವಿರುವ ಯಾವುದೇ ಸರ್ಕಾರಗಳನ್ನು ಸರಿಯಾಗಿ ಕಾರ್ಯನಿರ್ವಹಿಸಲು ಬಿಜೆಪಿ ಬಿಡುವುದಿಲ್ಲ ಎಂದು ದೂರಿದೆ.
ಕಾಂಗ್ರೆಸ್ ರಾಜಸ್ಥಾನದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಂಡಿದೆ. ಶುಕ್ರವಾರ ರಾಜ್ಯ ವಿಧಾನಮಂಡಲ ಅಧಿವೇಶನಗಳು ಆರಂಭವಾಗಲಿದ್ದು, ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರ ನಡೆಸುವುದು ಖಚಿತವಾಗಿದೆ. ಬಿಜೆಪಿಯ ಕೆಲಸಗಳಿಗೆ ಎಲ್ಲರೂ ನಗುತ್ತಿದ್ದಾರೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ವ್ಯಂಗ್ಯ ಮಾಡಲಾಗಿದೆ.
ರಾಜಸ್ಥಾನದಲ್ಲಿ ಸಿಎಂ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿ ಅಸಮಾಧಾನಗಳು ಭುಗಿಲೆದ್ದಿದ್ದವು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ಸಭೆಯೊಂದನ್ನು ನಡೆಸಿ ಸ್ವಲ್ಪ ಮಟ್ಟಿಗೆ ಬಂಡಾಯವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.
ಇದರ ಹಿನ್ನೆಲೆಯಲ್ಲಿ ಪೈಲಟ್ ನೇತೃತ್ವದ ಬಂಡಾಯ ಶಾಸಕರು ಅಶೋಕ್ ಗೆಹ್ಲೋಟ್ ಅವರ ಚಕ್ರವ್ಯೂಹವನ್ನು ಭೇದಿಸುವಲ್ಲಿ ಯಶಸ್ವಿಯಾಗಿಲ್ಲ. ಬಿಜೆಪಿಯ ತಂತ್ರ ಇಲ್ಲಿ ಸಂಪೂರ್ಣವಾಗಿ ನೆಲಕಚ್ಚಿಗೆ ಎಂದು ಶಿವಸೇನೆ ಹೇಳಿಕೊಂಡಿದೆ.
ಸೆಪ್ಟೆಂಬರ್ ತಿಂಗಳಿನ ಒಳಗೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಪದಚ್ಯುತಗೊಳಿಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಕಾರಣದಿಂದ ಅವರು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಜಾರ್ಖಂಡ್ನಲ್ಲಿರುವ ಸರ್ಕಾರವನ್ನು ಪದಚ್ಯುತಗೊಳಿಸಲು ಯತ್ನಿಸಲಿದೆ ಎಂದು ಶಿವಸೇನೆ ಭವಿಷ್ಯ ನುಡಿದಿದೆ.
ಈ ಮೊದಲು ರಾಜಸ್ಥಾನದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿರಲಿಲ್ಲ. ಮಹಾರಾಷ್ಟ್ರದಲ್ಲೂ ಆಪರೇಷನ್ ಕಮಲ ವಿಫಲಗೊಂಡಿತ್ತು. ಈಗ ಮತ್ತೆ ಮಹಾರಾಷ್ಟ್ರಕ್ಕೆ ಬೋಗಸ್ ವೈದ್ಯರನ್ನು ಕಳುಹಿಸಿ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿದೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.