ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಹೆಚ್ಚಾದ ಭ್ರಷ್ಟಾಚಾರದ ಕರಾಳ ಛಾಯೆ - ಭಾರತದಲ್ಲಿ ಭ್ರಷ್ಟಾಚಾರ

ಜಾಗತಿಕ ಭ್ರಷ್ಟಾಚಾರ ಪ್ರವೃತ್ತಿಯ ಬಗ್ಗೆ ವರದಿ ನೀಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಪ್ರಕಾರ 2014 ರಲ್ಲಿ ಭಾರತದ ಭ್ರಷ್ಟಾಚಾರ ಶ್ರೇಯಾಂಕವು 85 ನೇ ಸ್ಥಾನದಲ್ಲಿತ್ತು. ಈ ವರ್ಷ ಭಾರತದ ಶ್ರೇಯಾಂಕ ಮತ್ತಷ್ಟು ಕುಸಿತ ಕಂಡಿದೆ.

ಭ್ರಷ್ಟಾಚಾರ
Corruption

By

Published : Feb 4, 2021, 3:07 PM IST

ಪ್ರಾಮಾಣಿಕ ಆಡಳಿತ ವ್ಯವಸ್ಥೆಯು ಭ್ರಷ್ಟರನ್ನು ತೊಡೆದು ಹಾಕುತ್ತದೆ ಎಂದು ಎರಡನೇ ಆಡಳಿತ ಸುಧಾರಣಾ ಆಯೋಗ ಹೇಳಿದೆ. ಆಯೋಗದ ವರದಿ ಅನೇಕ ರೀತಿಯ ಬುದ್ಧಿಮಾತುಗಳನ್ನು ಹೇಳಿದೆ. ವಿಪರ್ಯಾಸ ಎಂದರೆ ಸುಧಾರಣಾ ಆಯೋಗ ರಚಿಸಿದ ಯುಪಿಎ ಆಡಳಿತ ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಕೊಂಡೊಯ್ದ ಕುಖ್ಯಾತಿ ಗಳಿಸಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಮೊದಲ ಬಾರಿಗೆ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಭಾರತ ಚೀನಾಕ್ಕಿಂತ ಉತ್ತಮವಾಗಿದೆ ಎಂದು ಸುಮಾರು ಐದು ವರ್ಷಗಳ ಹಿಂದೆ ಹೇಳಿತ್ತು. ಆದರೆ ಅದೇ ಸಂಸ್ಥೆ ನೀಡಿರುವ ಇತ್ತೀಚಿನ ವರದಿ ಪ್ರಸ್ತುತ ಸಂಪೂರ್ಣ ಭಿನ್ನ ಚಿತ್ರಣ ನೀಡುತ್ತದೆ. ಜಾಗತಿಕ ಭ್ರಷ್ಟಾಚಾರ ಪ್ರವೃತ್ತಿಯ ಬಗ್ಗೆ ವರದಿ ನೀಡುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಪ್ರಕಾರ 2014 ರಲ್ಲಿ ಭಾರತದ ಭ್ರಷ್ಟಾಚಾರ ಶ್ರೇಯಾಂಕವು 85 ನೇ ಸ್ಥಾನದಲ್ಲಿತ್ತು. ಈ ವರ್ಷ ಭಾರತದ ಶ್ರೇಯಾಂಕ ಮತ್ತಷ್ಟು ಕುಸಿತ ಕಂಡಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ನಡೆಸಿರುವ ಪ್ರಾಮಾಣಿಕತೆ ಪರೀಕ್ಷೆಯಲ್ಲಿ, ಡೆನ್ಮಾರ್ಕ್ ಮತ್ತು ನ್ಯೂಜಿಲೆಂಡ್ ದೇಶಗಳು 100 ರಲ್ಲಿ ಶೇ 88 ಹಾಗೂ ಫಿನ್‌ಲ್ಯಾಂಡ್ , ಸಿಂಗಾಪುರ , ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್‌ಗಳು ಶೇಕಡಾ 85 ರಷ್ಟು ಅಂಕ ಗಳಿಸಿದ್ದು ಇದರಿಂದಾಗಿ ಇವು ವಿಶ್ವದ ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳು ಎಂದು ಸಾಬೀತಾಗಿದೆ. ಈ ಪರೀಕ್ಷೆಯಲ್ಲಿ ಭಾರತವು ಕೇವಲ ಶೇ 40 ರಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಜಾಗತಿಕ ಸರಾಸರಿ 43 ಆಗಿದ್ದು, 31 ಏಷ್ಯಾ - ಪೆಸಿಫಿಕ್ ರಾಷ್ಟ್ರಗಳು ಗಳಿಸಿದ ಸರಾಸರಿ ಅಂಕ ಶೇ 45 ರಷ್ಟು ಇದೆ. ಭಾರತದ ಶ್ರೇಯಾಂಕ ಏಷ್ಯಾ - ಪೆಸಿಫಿಕ್ ದೇಶಗಳ ಸರಾಸರಿಗಿಂತಲೂ ಕೆಟ್ಟದಾಗಿದೆ. ಚೀನಾ 42 ಅಂಕಗಳೊಂದಿಗೆ 78 ನೇ ಶ್ರೇಯಾಂಕ ಗಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಕೇವಲ ಆರ್ಥಿಕ ಮತ್ತು ಆರೋಗ್ಯ ವಿಪತ್ತು ಮಾತ್ರವಲ್ಲ , ಭ್ರಷ್ಟಾಚಾರದ ವಿಷವನ್ನೂ ಉಣಿಸಿದೆ ಎಂದು ʼಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ʼ ಹೇಳಿದೆ. ಸರ್ಕಾರಗಳು ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಅದು ಟೀಕಿಸಿದೆ.

ಎರಡು ತಿಂಗಳ ಹಿಂದೆ, ಜಾಗತಿಕ ಭ್ರಷ್ಟಾಚಾರ ಮಾಪಕ ಹೇಳಿರುವ ಪ್ರಕಾರ ಶೇಕಡಾ 39 ರಷ್ಟು ಸ್ವೀಕರಿಸುವುದರೊಂದಿಗೆ ಭ್ರಷ್ಟಾಚಾರದ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದೆ. ಭಾರತದಲ್ಲಿ ಸಾಮಾನ್ಯ ಮನುಷ್ಯ ತನ್ನ ಯಾವುದೇ ಕಾರ್ಯಗಳನ್ನು ಶಿಫಾರಸು ಪತ್ರವಿಲ್ಲದೆ ಅಥವಾ ಲಂಚ ನೀಡುವ ಸಾಮರ್ಥ್ಯ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರಿಸ್ಥಿತಿ ಪ್ರತಿಬಿಂಬಿಸುತ್ತದೆ. ಸ್ವಯಂ ಸಮೃದ್ಧ ಭಾರತವನ್ನು ( ಸೆಲ್ಫ್ ರಿಲಯಂಟ್ ಇಂಡಿಯಾ ) ಸಾಧಿಸಲು ಭ್ರಷ್ಟಾಚಾರವು ಅತಿದೊಡ್ಡ ಅಡಚಣೆಯಾಗಿದೆ ಎಂದು ವಿಷಾದಿಸಿ ಪ್ರಧಾನಿ ನರೇಂದ್ರ ಮೋದಿ ಕಳೆದ ಅಕ್ಟೋಬರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಪೂರ್ಣ ಪ್ರಮಾಣದ ಸಮರಕ್ಕೆ ಕರೆ ನೀಡಿದ್ದರು. ಆ ಯುದ್ಧಕ್ಕೆ ರಾಷ್ಟ್ರವನ್ನು ಯಾರು ಅಣಿ ಮಾಡಬೇಕು.

ಭಾರತ ಕರ್ಮ ಭೂಮಿಯಾಗಿದ್ದು, ಹೆಚ್ಚಿನ ಜನರು ಎಲ್ಲಾ ತಪ್ಪುಗಳ ಬಗ್ಗೆ ನಿಷ್ಕ್ರಿಯರಾಗಿದ್ದಾರೆ. ಅವರ ಕರ್ಮದ ಫಲಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುತ್ತಾರೆ. ಇದರ ಪರಿಣಾಮ ಭ್ರಷ್ಟಾಚಾರದ ವಿಷವೃಕ್ಷ ಎಲ್ಲೆಡೆ ಬಲವಾದ ಬೇರುಗಳನ್ನು ಚಾಚಿದೆ. ಭ್ರಷ್ಟಾಚಾರವು ಕನಿಷ್ಠ ಅಪಾಯದೊಂದಿಗೆ ಹೆಚ್ಚಿನ ಲಾಭವನ್ನು ನೀಡುವ ಉದ್ಯಮವಾಗಿ ಮಾರ್ಪಟ್ಟಿದೆ. ಇದು ಜನರ ಜೀವನದೊಂದಿಗೆ ಆಟ ಆಡುತ್ತಿದೆ. ಕೇವಲ ನಾಲ್ಕು ವಾರಗಳ ಹಿಂದೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಸ್ಮಶಾನವೊಂದರಲ್ಲಿ ಮಳೆ ಸುರಿದು 25 ಮಂದಿ ಸಾವನ್ನಪ್ಪಿದ್ದರು. ಅಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಲಾಗಿತ್ತು. ಈ ಮೊತ್ತದ ಸುಮಾರು ಶೇ 30 ರಷ್ಟು ಹಣ ಲಂಚಕ್ಕೆ ಮೀಸಲಿಡಲಾಗಿತ್ತು. ಉಳಿದ ಮೊತ್ತದೊಂದಿಗೆ ಗುತ್ತಿಗೆದಾರ ತನ್ನ ಲಾಭ ಹೊಂದಿಸಬೇಕಾಗಿತ್ತು. ನಿರ್ಮಾಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದರಿಂದ ಅನೇಕರ ಪ್ರಾಣಪಕ್ಷಿ ಹಾರಿಹೋಯಿತು.

ಎಂಟು ಪೊಲೀಸ್ ಅಧಿಕಾರಿಗಳು ಮತ್ತು ಐವರು ಸುಂಕಾಧಿಕಾರಿಗಳು ಲಂಚ ಪಡೆಯದೆ ಇದ್ದರೆ 1993 ರ ಮುಂಬೈ ಬಾಂಬ್ ಸ್ಫೋಟ ಸಂಭವಿಸುತ್ತಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಖುದ್ದು ಹೇಳಿತ್ತು. ಪ್ರತಿವರ್ಷ ಲಕ್ಷಾಂತರ ಕೋಟಿ ರೂ.ಗಳನ್ನು ಒಳಗೊಂಡ ಬೃಹತ್‌ ವಾರ್ಷಿಕ ಬಜೆಟ್ ಘೋಷಣೆ ಆಗುತ್ತದೆ. ಆದರೆ ಪ್ರಗತಿಯ ರಥವು ತನ್ನ ಹಾದಿಯಲ್ಲಿ ಹಲವು ಕಂದಕಗಳನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರ ಇಲ್ಲ ಎಂದು ಖ್ಯಾತಿ ಪಡೆದಿರುವ ಡೆನ್ಮಾರ್ಕ್‌ ನಂತಹ ದೇಶಗಳು ತಮ್ಮ ಒಟ್ಟು ದೇಶೀಯ ಉತ್ಪನ್ನದ ಶೇ 55 ರಷ್ಟು ಹಣವನ್ನು ಲೋಕೋಪಯೋಗಿ ಕಾಮಗಾರಿ ಮತ್ತು ಸೇವೆಗಳಿಗೆ ಖರ್ಚು ಮಾಡುತ್ತಿವೆ. ಆ ಸರಾಸರಿಯ ನಾಲ್ಕನೇ ಒಂದರಷ್ಟು ಭಾಗವನ್ನು ಆ ಉದ್ದೇಶಕ್ಕಾಗಿ ಮೀಸಲಿಡಲು ಭಾರತಕ್ಕೆ ಸಾಧ್ಯವಾಗಿಲ್ಲ. ಆ ಅಲ್ಪ ಮೊತ್ತವನ್ನು ಸಹ ಭ್ರಷ್ಟ ಡಕಾಯಿತರು ಕೊಳ್ಳೆ ಹೊಡೆಯುತ್ತಾರೆ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಮಾಹಿತಿ ಹಕ್ಕು ಕಾಯ್ದೆ ಸ್ವತಃ ನಿಷ್ಪರಿಣಾಮಕಾರಿಯಾಗಿದೆ. ಇದು ದೇಶದಲ್ಲಿನ ಭ್ರಷ್ಟಾಚಾರದ ಕರಾಳ ಛಾಯೆ ಅಲ್ಲದೆ ಮತ್ತೇನು? ಮುಖ್ಯ ವಿಚಕ್ಷಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಎನ್. ವಿಠಲ್ ಅವರು ಎನ್​ಸಿಸಿ ಮಾದರಿಯಲ್ಲಿ ಯುವಜನರಿಗಾಗಿ ರಾಷ್ಟ್ರೀಯ ವಿಚಕ್ಷಣಾ ದಳ ( ಎನ್‌ವಿಸಿ ) ರೂಪಿಸುವಂತೆ ಸೂಚಿಸಿದ್ದರು. ಈ ಸಲಹೆ ನೀಡಿ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ. ಆದರೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕತ್ತಲೆಯನ್ನು ದೂಷಿಸುತ್ತ ಕೂರುವ ಸಮಯ ಇದಲ್ಲ. ನೋಟು ಅಮಾನ್ಯೀಕರಣದ ವೇಳೆ ದೊಡ್ಡ ಮೊತ್ತದ ನೋಟುಗಳಿಗೆ ಬೆಂಬಲ ನೀಡಿದಂತೆಯೇ ಜನ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿಯೂ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ. ಈಗ ರಣಕಹಳೆ ಮೊಳಗಿಸುವ ಸರದಿ ಮೋದಿ ಸರ್ಕಾರದ್ದು.

ABOUT THE AUTHOR

...view details