ಗ್ವಾಲಿಯರ್ (ಮಧ್ಯಪ್ರದೇಶ): ಪರೀಕ್ಷೆ ಬರೆಸಲು ತನ್ನ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರಕ್ಕೆ ಸ್ಕೂಟರ್ನಲ್ಲಿ ಕರೆತಂದು ದೇಶದ ಗಮನ ಸೆಳೆದಿದ್ದ ಜಾರ್ಖಂಡ್ನ ವ್ಯಕ್ತಿಗೆ ಸಾಕಷ್ಟು ಜನರು ನೆರವು ನೀಡಿದ್ದಾರೆ.
ಧನಂಜಯ್ ಮತ್ತು ಸೋನಿ ಹೆಂಬ್ರಮ್ ದಂಪತಿಯ ಸಾಹಸಗಾಥೆ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಸಹಾಯಕ್ಕೆ ಧಾವಿಸಿದ ಅದಾನಿ ಫೌಂಡೇಶನ್ ಅಧ್ಯಕ್ಷೆ ಸ್ವೀಟಿ ಅದಾನಿ, ದಂಪತಿಗೆ ಊರಿಗೆ ತೆರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ಗ್ವಾಲಿಯರ್ ಮರ್ಚೆಂಟ್ ಅಸೋಸಿಯೇಷನ್ ಈ ದಂಪತಿಯ ಸ್ಕೂಟರ್ನ್ನು ರೈಲಿನ ಮುಖಾಂತರ ಮನೆಗೆ ತಲುಪಿಸುವುದಾಗಿ ಹೇಳಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಧನಂಜಯ್, ಅದಾನಿ ಫೌಂಡೇಶನ್ ಅಧ್ಯಕ್ಷರು ನಮಗೆ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಿದ್ದಾರೆ. ಸೆಪ್ಟೆಂಬರ್ 16 ರಂದು ಹೈದರಾಬಾದ್ ಮೂಲಕ ರಾಂಚಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ.
ಪತ್ನಿಯನ್ನು ಸ್ಕೂಟರ್ನಲ್ಲಿ ಕರೆತಂದಿದ್ದ ಧನಂಜಯ್ ಇದನ್ನೂ ಓದಿ:ಪರೀಕ್ಷೆಗೋಸ್ಕರ ಏಳು ತಿಂಗಳ ಗರ್ಭಿಣಿ ಪತ್ನಿಯನ್ನ ಸ್ಕೂಟರ್ ಮೇಲೆ 1,150 ಕಿ.ಮೀ ಕರೆದೊಯ್ದ ಗಂಡ!
ಜಾರ್ಖಂಡ್ನ ಗೊಡ್ಡಾ ಜಿಲ್ಲೆಯ ಗಂಟಾತೊಲಾ ಗ್ರಾಮದ ಧನಂಜಯ್, ತನ್ನ ಪತ್ನಿಯನ್ನು ಡಿಎಡ್ ಪರೀಕ್ಷೆ ಬರೆಸಲು ತನ್ನ ಗ್ರಾಮದಿಂದ 1,150 ಕಿ.ಮೀ ದೂರದ ಮಧ್ಯಪ್ರದೇಶ ಗ್ವಾಲಿಯರ್ಗೆ ಸ್ಕೂಟರ್ನಲ್ಲಿ ಕರೆತಂದಿದ್ದ. ವಿಶೇಷವೆಂದರೆ, ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ಧನಂಜಯ್ ಪತ್ನಿ ತುಂಬು ಗರ್ಭಿಣಿ ಸೋನಿ ಹೆಂಬ್ರಮ್ ಕೂಡ ಹೇಗಾದರೂ ಪರೀಕ್ಷೆ ಬರೆಯಲೇಬೇಕೆಂದು ಸಾಹಸ ಮಾಡಿ ಗಂಡನೊಂದಿಗೆ ಸ್ಕೂಟರ್ ಪ್ರಯಾಣ ಮಾಡಿದ್ದಳು. ಸಾವಿರಕ್ಕೂ ಹೆಚ್ಚು ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿ ಗ್ವಾಲಿಯರ್ ತಲುಪಿದ ಸೋನಿ, ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾಳೆ. ದಂಪತಿಯ ಕಾರ್ಯಕ್ಕೆ ದೇಶಾದ್ಯಂತ ಶ್ಲಾಘಣೆ ವ್ಯಕ್ತವಾಗಿದೆ ಮತ್ತು ನೆರವಿನ ಮಹಾಪೂರ ಹರಿದು ಬಂದಿದೆ.