ಮುಂಬೈ: ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದು, ಸರಿಯಾದ ಸಮಯಕ್ಕೆ ಮನೆಗೆ ಹೋಗಲು ಆಗದೇ ತೊಂದರೆ ಅನುಭವಿಸುತ್ತಿದ್ದಾರೆ.
ರಾಜ್ಯದಿಂದಲೂ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ವಲಸೆ ಕಾರ್ಮಿಕರು ಸಿಲುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಿಲುಕೊಂಡಿದ್ದ ಕರ್ನಾಟಕದ ಕೂಲಿ ಕಾರ್ಮಿಕರನ್ನು ಊರಿಗೆ ಕಳುಹಿಸಿ ಬಾಲಿವುಡ್ ನಟ ಸೋನು ಸೂದ್ ನಿಜವಾದ ಹೀರೋ ಆಗಿದ್ದಾರೆ.
ಕನ್ನಡಿಗರಿಗೆ ಮಿಡಿದ ಬಾಲಿವುಡ್ ನಟನ ಮನ ಸಿನಿಮಾಗಳಲ್ಲಿ ಅತಿ ಹೆಚ್ಚು ವಿಲನ್ ಪಾತ್ರ ಮಾಡುವ ಇವರು, ಇದೀಗ ಕನ್ನಡಿಗರಿಗಾಗಿ ಸಹಾಯ ಮಾಡಿದ್ದು, ಬರೋಬ್ಬರಿ 10 ಬಸ್ಗಳಲ್ಲಿ ಅವರನ್ನು ತವರು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದು, ಬಸ್ ಹತ್ತಿಸಲು ಖುದ್ದಾಗಿ ಸ್ಥಳಕ್ಕೆ ಹೋಗಿದ್ದರು. ಕೂಲಿ ಕಾರ್ಮಿಕರನ್ನ ಅವರ ತವರು ರಾಜ್ಯಗಳಿಗೆ ಕಳುಹಿಸುವ ಉದ್ದೇಶದಿಂದ ಅವರು ಮಹಾರಾಷ್ಟ್ರ- ಕರ್ನಾಟಕ ಸರ್ಕಾರದಿಂದ ಪಾಸ್ ಸಹ ಪಡೆದುಕೊಂಡಿದ್ದರು. ಕಾರ್ಮಿಕರಿಗೆ ಆಹಾರದ ಕಿಟ್ ಸಹ ನೀಡಿದ್ದಾರೆ. ಬಸ್ ಹತ್ತಿಕೊಂಡ ಕೂಲಿ ಕಾರ್ಮಿಕರು ಹೀರೋ ಹೀರೋ ಎಂದು ಸಂತೋಷದಲ್ಲೇ ಕೂಗಿ ಹೇಳಿದ್ದಾರೆ.
ಈ ಹಿಂದೆ ಕೂಡ ಅನೇಕ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದ ಸೋನು ಸೂದ್, ಪಂಜಾಬ್ಗೆ ಸರ್ಕಾರಕ್ಕೆ 1500 ಪಿಪಿಇ ಕಿಟ್ ಸಹ ನೀಡಿದ್ದರು.