ಚಕ್ಸು (ರಾಜಸ್ಥಾನ):ಕರೌಲಿ ಗ್ರಾಮದಲ್ಲಿ ಅರ್ಚಕರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದ್ದು, ರಾಜಸ್ಥಾನ ನಿಧಾನವಾಗಿ ಅಪರಾಧಗಳ ರಾಜಧಾನಿಯಾಗಿ ಬದಲಾಗುತ್ತಿದೆ ಅನ್ನೋದಕ್ಕೆ ಈ ಪ್ರಕರಣವೂ ಸಾಕ್ಷಿಯಾಗಿದೆ.
ಮುಸುಕುಧಾರಿಗಳ ತಂಡವೊಂದು ಸ್ಥಳೀಯ ರಾಜಕೀಯ ನಾಯಕನ ಮಗನ ಮೇಲೆ ಆಸಿಡ್ ಎರಚಿ ಪರಾರಿಯಾಗಿದೆ. ಟಿಟಾರಿಯಾ ಎಂಬ ಪಂಚಾಯತ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸರ್ಪಂಚ್ ಅಭ್ಯರ್ಥಿ ಸರ್ಗ್ಯಾನ್ ದೇವಿ ಎಂಬುವರ ಮಗನ ಮೇಲೆ ಈ ಆಸಿಡ್ ದಾಳಿ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 12 ಗಂಟೆಗೆ ಈ ಘಟನೆ ನಡೆದಿದ್ದು, ದಾಳಿಗೊಳಗಾದ ವ್ಯಕ್ತಿಯನ್ನು ಸ್ಥಳೀಯ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಸುಕುಧಾರಿಗಳು ವ್ಯಕ್ತಿಯನ್ನು ಮೊದಲು ಥಳಿಸಿ ನಂತರ ಆಸಿಡ್ ಎರಚಿ ಪರಾರಿಯಾಗಿದ್ದಾರೆ. ದಾಳಿಕೋರರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ದಾಳಿಗೆ ಕಾರಣ ಪತ್ತೆಹಚ್ಚಲಾಗುತ್ತಿದೆ. ಜೊತೆಗೆ ಆರೋಪಿಗಳಿಗಾಗಿ ಶೋಧನೆ ಮುಂದುವರೆದಿದೆ ಎಂದು ಶಿವದಸ್‌ಪುರ ಪೊಲೀಸ್ ಅಧಿಕಾರಿ ಇಂದ್ರಜ್ ಮರೋಡಿಯಾ ಮಾಹಿತಿ ನೀಡಿದ್ದಾರೆ. ಆಸಿಡ್ ದಾಳಿ ಕುರಿತು ಇದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜಸ್ಥಾನದಲ್ಲಿ 4ನೇ ಹಂತದ ಪಂಚಾಯತ್ ರಾಜ್ ಚುನಾವಣೆಗೆ ಮತದಾನ ನಡೆಯುತ್ತಿದ್ದು ದಾಳಿಗೆ ರಾಜಕೀಯ ದ್ವೇಷವೇ ಕಾರಣ ಎನ್ನಲಾಗುತ್ತಿದೆ.