ಹರಿಯಾಣ: ಸಾಧಿಸುವ ಛಲ ಮತ್ತು ಗುರಿಯ ಬಗೆಗಿರುವ ಅಪಾರ ಕಾಳಜಿ ನಮಗೆ ಸಾಧನೆ ಮಾಡಲು ಹುರುಪು ನೀಡುತ್ತದೆ. ಈ ಮಾತಿಗೆ ಪೂರಕ ಎಂಬಂತೆ ಹಾಕಿ ಕ್ಷೇತ್ರದಲ್ಲಿ ಮೇರು ಸಾಧನೆಗೈದು ಇದೀಗ ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ರಾಣಿ ರಾಂಪಾಲ್ ಜೀವನಗಾಥೆ ಎಲ್ಲರಿಗೂ ಸ್ಫೂರ್ತಿಯಾಗುತ್ತೆ.
ತಂದೆ ಕೊಟ್ಟ ಹಾಕಿ ಸ್ಟಿಕ್ ನಲ್ಲಿ ಮಗಳ ಶಿಖರ ಸಾಧನೆ:
ರಾಣಿ ರಾಂಪಾಲ್. ಇವರು ಡಿಸೆಂಬರ್ 4, 1994ರಲ್ಲಿ ಹರಿಯಾಣದ ಕುರುಕ್ಷೇತ್ರದ ಸಣ್ಣ ಪಟ್ಟಣ ಶಹಾಬಾದ್ನಲ್ಲಿ ಜನಿಸಿದರು. ಇವರ ತಂದೆ ರಾಂಪಾಲ್ ಬಳಿ ಒಂದು ಕುದುರೆಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುದುರೆಯೇರಿದ ಇವರು ಜೀವನದ ಹೊರೆ ನಿಭಾಯಿಸುತ್ತಿದ್ದರು. ಮಗಳು ರಾಣಿ 4ನೇ ತರಗತಿಯಲ್ಲಿದ್ದಾಗಲೇ ಹಾಕಿ ಕ್ರೀಡೆ ಮೇಲೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಳು. ಈಕೆಯ ಆಸಕ್ತಿಯನ್ನು ಗುರುತಿಸಿದ ತಂದೆ ರಾಂಪಾಲ್ ಹಾಕಿ ಸ್ಟಿಕ್ ಉಡುಗೊರೆಯಾಗಿ ನೀಡ್ತಾರೆ. ಅಲ್ಲಿಂದ ಆಕೆಯ ಹಾಕಿ ಜೀವನ ಶುರುವಾಗುತ್ತೆ.
ಹಾಕಿ ಕ್ರೀಡಾ ಕ್ಷೇತ್ರದಲ್ಲಿ ಮೇರು ಸಾಧನೆಗೈದ ರಾಣಿ ರಾಂಪಾಲ್ ಯಶೋಗಾಥೆ ಹೀಗೆ ಹಾಕಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾ ಹೋದ ರಾಣಿ ತನ್ನ 13ನೇ ವರ್ಷದಲ್ಲೇ ಭಾರತೀಯ ಹಾಕಿ ತಂಡಕ್ಕೆ ಆಯ್ಕೆಯಾಗ್ತಾಳೆ. ಬಳಿಕ 14ನೇ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದರು. 2009ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಆಕೆಯ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ, 2010ರಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಂಡ ರಾಣಿ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಆಕೆಗೆ ಕೇವಲ 15 ವರ್ಷ. 2010ರಲ್ಲಿ ನಡೆದ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಿದ್ದರು. ಅಷ್ಟೇ ಅಲ್ಲ, 2013ರಲ್ಲಿ ನಡೆದ ಜೂನಿಯರ್ ಹಾಕಿ ವಿಶ್ವಕಪ್ನಲ್ಲೂ ಪಾಲ್ಗೊಂಡಿದ್ದು, ಈ ಆಟದಲ್ಲಿ ಭಾರತೀಯ ತಂಡ ಕಂಚಿನ ಪದಕಗಳಿಸಿ 38 ವರ್ಷಗಳ ಬಳಿಕ ಅಪರೂಪದ ಸಾಧನೆ ಮಾಡಿತ್ತು.
ಈಗಾಗಲೇ ರಾಣಿ ಅವರು ಬೆಸ್ಟ್ ಯಂಗ್ ಫಾರ್ವರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ. ಈಕೆಯ ಈ ಸಾಧನೆಗೆ ತಂದೆ ರಾಂಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ರಾಣಿ ಇಡೀ ದೇಶ ಹೆಮ್ಮೆಪಡುವಂತೆ ಮಾಡಿದ್ದಾಳೆ. ಅವಳ ಎಲ್ಲಾ ಕನಸು ಈಡೇರಲಿ' ಎಂದು ಹಾರೈಸಿದರು.
ಕ್ರೀಡಾ ಕ್ಷೇತ್ರದಲ್ಲಿ ರಾಣಿ ಪ್ರಗತಿ ಹೊಂದಿದಂತೆ ಆಕೆಯ ಕುಟುಂಬದ ಆರ್ಥಿಕತೆಯೂ ಸುಧಾರಿಸಲು ಪ್ರಾರಂಭಿಸಿತು. ಆಕೆಗೆ ಕ್ರೀಡೆಯ ಮೇಲಿದ್ದ ಪ್ರೀತಿ ಆಕೆಯನ್ನು ಸಾಧನೆಯ ಶಿಖರವನ್ನೇರುವಂತೆ ಮಾಡಿದೆ ಎಂದರೆ ತಪ್ಪಾಗಲ್ಲ. ಈಕೆ ಛಲ ಎಲ್ಲರಿಗೂ ಸ್ಪೂರ್ತಿಯಾಗಲಿ.