ಅಸ್ಸೋಂ: ನಾಳೆ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಸೂದೆ ವಿರೋಧಿಸಿ ಆಲ್ ಅಸ್ಸೋಂ ಸ್ಟೂಡೆಂಟ್ಸ್ ಯೂನಿಯನ್ (AASU) ಗುವಾಹಟಿಯಲ್ಲಿ ಪಂಜಿನ ಮೆರವಣಿಗೆ ನಡೆಸಿದೆ.
ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ವಿರೋಧ, ಪ್ರತಿಭಟನೆಗಳನ್ನು ಸೃಷ್ಟಿಸಿರುವ ಈ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಪರಿಗಣಿಸಿ ಅಂಗೀಕರಿಸುವ ನಿರೀಕ್ಷೆಯಿದೆ. ಒಂದೊಮ್ಮೆ ಮಸೂದೆ ಕಾಯ್ದೆ ರೂಪ ಪಡೆದು ಜಾರಿಯಾದ್ರೆ ಲಕ್ಷಾಂತರ ಮುಸ್ಲಿಮೇತರ ವಲಸಿಗರಿಗೆ ಕಾಯಂ ಭಾರತೀಯ ಪೌರತ್ವ ಸಿಗಲಿದೆ.
ಏನಿದು ಪೌರತ್ವ ತಿದ್ದುಪಡಿ ಮಸೂದೆ?
ಆರು ದಶಕಗಳಷ್ಟು ಹಳೆಯದಾದ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಅಲ್ಲಿನ ಧಾರ್ಮಿಕ ಕಿರುಕುಳದಿಂದ ಪಾರಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ (ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್) ನಿರಾಶ್ರಿತರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೇ ಅಂತಹ ನಿರಾಶ್ರಿತರಿಗೆ ಈ ಹಿಂದೆ ಇದ್ದ 11 ವರ್ಷಗಳ ಬದಲು 5 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದರೆ ಸಾಕು ಬಳಿಕ ಭಾರತೀಯ ಪೌರತ್ವ ನೀಡಲಾಗುವುದು. ಕಾನೂನು ಪ್ರಕರಣಗಳನ್ನು ಎದುರಿಸುತ್ತಿರುವ ಅಂತಹ ನಿರಾಶ್ರಿತರಿಗೆ ವಿನಾಯಿತಿ ನೀಡುವುದರ ಕುರಿತೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.