ಮುಂಬೈ: ವಾಣಿಜ್ಯ ನಗರಿಯ ಹುಡುಗಿಯೊಬ್ಬಳು ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರದ ಮೇಲೆ ಒಂಟಿಯಾಗಿ ಹಾರಿ ದಾಖಲೆ ನಿರ್ಮಿಸಿದ್ದಾಳೆ. ಈ ಮೂಲಕ ಈ ಎರಡೂ ಸಾಗರಗಳನ್ನು ವಿಮಾನದ ಮೂಲಕ ಒಂಟಿಯಾಗಿ ದಾಟಿದ ಮೊದಲ ಮಹಿಳಾ ಪೈಲಟ್ ಎಂಬ ದಾಖಲೆಯನ್ನೂ ಈ ಭಾರತೀಯ ಕುವರಿ ನಿರ್ಮಿಸಿದ್ದಾರೆ.
23 ವರ್ಷ ವಯುಸ್ಸಿನ ಮುಂಬೈನ ಆರೋಹಿ ಪಂಡಿತ್ ಈ ಸಾಧನೆಗೈದ ಹೆಮ್ಮೆಯ ಭಾರತೀಯ ನಾರಿ. ಅಮೆರಿಕಾದ ಅಲಾಸ್ಕದಲ್ಲಿರೋ ಉನಲಾಲೀಟ್ ನಗರದಿಂದ ಫೆಸಿಫಿಕ್ ಸಾಗರದ ಬೇರಿಂಗ್ ಸಮುದ್ರ ದಾಟಿದ ಆರೋಹಿ, ರಷ್ಯಾದ ಚುಕೋಟ್ಕಾ ನಗರದ ಅನದಿರ್ ವಿಮಾನ ನಿಲ್ದಾಣದಲ್ಲಿ ಸೇಫ್ ಆಗಿ ಲ್ಯಾಂಡ್ ಆಗಿದ್ದಾರೆ. ಈ ಮೂಲಕ 1100 ಕಿ.ಮೀ ದೂರವನ್ನು 3 ಗಂಟೆ 50 ನಿಮಿಷಗಳಲ್ಲಿ ಕ್ರಮಿಸಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಆರೋಹಿ ಬಳಸಿದ್ದು ಲಘು ಕ್ರೀಡಾ ವಿಮಾನ(ಎಲ್ಎಸ್ಎ)ವನ್ನು.
ಅನದಿರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆರೋಹಿ ಪಂಡಿತ್, ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು ಸಂಭ್ರಮ ಪಟ್ಟಿದ್ದಾರೆ. ಈ ಮೂಲಕ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.