ನವದೆಹಲಿ: ಮೆಟ್ರೋ ಕಾಮಗಾರಿಗಾಗಿ ಮುಂಬೈನ ಅರೆ ಪ್ರದೇಶದಲ್ಲಿ ಮರಗಳ ಕಡಿಯುವ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಮರಗಳ ಉಳಿವಿಗೆ ಬೀದಿಗೆ ಇಳಿದಿದ್ದ ಅರೆ ಪ್ರದೇಶದ ನಿವಾಸಿಗಳಿಗೆ ಸದ್ಯಕ್ಕೆ ಕೊಂಚ ರಿಲೀಫ್ ದೊರೆತಿದೆ.
ಅರುಣ್ ಮಿಶ್ರಾ ಹಾಗೂ ಅಶೋಕ್ ಭೂಷಣ್ ನೇತೃತ್ವದ ವಿಶೇಷ ಪೀಠ ಇಂದು ಪ್ರಕರಣವನ್ನು ಕೈಗೆತ್ತಿಕೊಂಡು ತುರ್ತು ವಿಚಾರಣೆ ನಡೆಸಿದೆ. ಮರಗಳನ್ನು ಕಡಿಯುವುದಕ್ಕೆ ತಾತ್ಕಾಲಿಕ ತಡೆ ನೀಡಿ ಅ.21ರಂದು ಅರಣ್ಯ ಪೀಠದಲ್ಲಿ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ. ಸದ್ಯಕ್ಕೆ ಮರಗಳನ್ನು ಕಡಿಯಬೇಡಿ ಎಂದಿರುವ ಕೋರ್ಟ್ ಘಟನೆಯಲ್ಲಿ ಬಂಧಿಸಲಾಗಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂದಿದೆ.
ಏನಿದು ಪ್ರಕರಣ..?
ಮುಂಬೈನ ಅರೆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಮುಂಬೈ ಮೆಟ್ರೋ ನಿಗಮ ಉದ್ದೇಶಿಸಿತ್ತು. ಈ ನಡೆಯನ್ನು ಪರಿಸರ ಹೋರಾಟಗಾರರು ಹಾಗೂ ಅರೆ ನಿವಾಸಿಗಳು ವಿರೋಧಿಸಿದ್ದರು.
ಮೆಟ್ರೋ ನಡೆಯ ವಿರುದ್ಧ ಪರಿಸರವಾದಿಗಳು ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ ಹೊರಬಿದ್ದ ಸಂಜೆಯೇ ಮರಗಳನ್ನು ಕಡಿಯಲು ಮುಂದಾಗಿದ್ದರು. ಹೀಗಾಗಿ ಅರೆ ನಿವಾಸಿಗಳು ಹಾಗೂ ಪರಿಸರ ಹೋರಾಟಗಾರರು ಬೀದಿಗಿಳಿದು ಮರಗಳ ಉಳಿವಿಗಾಗಿ ಹೋರಾಟಕ್ಕೆ ಮುಂದಾದರು.
ಈ ಪ್ರಕರಣ ಸಂಬಂಧ ಇಪ್ಪತ್ತಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್ ಪ್ರಕರಣದ ಗಂಭಿರತೆ ಅರಿತು ತುರ್ತು ವಿಚಾರಣೆ ನಡೆಸಿ ತಾತ್ಕಾಲಿಕ ತಡೆ ನೀಡಿದೆ.