ನವದೆಹಲಿ:ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ದೆಹಲಿ ಸರ್ಕಾರದಿಂದ ನಿರ್ಭಯಾ ಅಪರಾಧಿಗಳ ರಕ್ಷಣೆ ಯತ್ನ: ಬಿಜೆಪಿ ಆರೋಪ - ನಿರ್ಭಯಾ ಅಪರಾಧಿಗಳ ರಕ್ಷಣೆಗೆ ಎಎಪಿ ಯತ್ನ
ಕೇಜ್ರಿವಾಲ್ ಸರ್ಕಾರವು ನಿರ್ಭಯಾ ಅಪರಾಧಿಗಳನ್ನ ರಕ್ಷಣೆ ಮಾಡಲು ಯತ್ನಿಸುತ್ತಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವುದನ್ನು ಎಎಪಿ ಸರ್ಕಾರ ಉದ್ದೇಶಪೂರ್ವಕವಾಗಿ ತಡೆದಿದೆ ಎಂದು ದೂರಿದ್ದಾರೆ. 2017ರಲ್ಲೇ ಮಾಹಿತಿ ನೀಡಬೇಕಿತ್ತು. ಆದರೆ 2019ರಲ್ಲಿ ಅಪರಾಧಿಗಳಿಗೆ ಮಾಹಿತಿ ನೀಡಲಾಗಿದೆ. ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವುದನ್ನು ತಡೆದ ಕೇಜ್ರಿವಾಲ್ ಸರ್ಕಾರ ಇದೀಗ ಅಪರಾಧಿಗಳಿಗೆ ರಕ್ಷಣೆ ಮಾಡುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದ್ದಾರೆ.
ಅಪರಾಧಿಗಳಿಗೆ ಕ್ಷಮೆ ನೀಡುವಂತೆ ಹಿರಿಯ ವಕೀಲ ಇಂದಿರಾ ಜೈಸಿಂಗ್ ನಿರ್ಭಯಾ ಅವರ ತಾಯಿಗೆ ಮಾಡಿದ ಮನವಿಯನ್ನು ಬಿಜೆಪಿ ಖಂಡಿಸಿದ್ದು, ಎಎಪಿ ಜೊತೆ ವಕೀಲರ ಒಡನಾಟ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ಅಲ್ಲದೆ ಪೊಲೀಸರು ನಮ್ಮ ಕೈಕೆಳಗಿಲ್ಲ ಎಂದು ಹೇಳುವ ಮೂಲಕ ಕೇಜ್ರಿವಾಲ್ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ತಿಹಾರ್ ಜೈಲು ದೆಹಲಿ ಸರ್ಕಾರದ ವ್ಯಪ್ತಿಯಲ್ಲಿದೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.