ನವದೆಹಲಿ: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ- ಪರರ ನಡುವೆ ನಡೆದ ಹಿಂಸಾಚಾರದಿಂದ ಈಗಾಗಲೇ 38 ಜನರು ಅಸುನಿಗಿದ್ದಾರೆ. ಗಲಭೆಗೆ ಬಳಸಿದ್ದ ವಸ್ತುಗಳು ಅಲ್ಲಲ್ಲಿ ಪತ್ತೆಯಾಗುತ್ತಿವೆ.
ನೆಹರೂ ವಿಹಾರ್ ಕ್ಷೇತ್ರದ ದೆಹಲಿ ಮುನ್ಸಿಪಲ್ನ ಕಾರ್ಪೊರೇಟರ್ ಒಬ್ಬರ ಮನೆ ಮತ್ತು ಮಾಳಿಗೆ ಮೇಲೆ ಕಲ್ಲು, ದೊಣ್ಣೆ, ಪೆಟ್ರೋಲ್ ಬಾಂಬ್ ಬಾಟಲ್, ಆ್ಯಸಿಡ್ ಪೌಚ್ಗಳು ಪತ್ತೆಯಾಗಿವೆ. ಈ ಬಗ್ಗೆ ದೂರು ದಾಖಲಾಗಿದ್ದು, ತೀವ್ರ ತನಿಖೆ ನಡೆಸಲಾಗುತ್ತಿದೆ.
ಹಿಂಸಾಚಾರ ಪೀಡಿತ ದೆಹಲಿಯ ಚಾಂದ್‌ಬಾಗ್ ಪ್ರದೇಶದ ಚರಂಡಿಯಲ್ಲಿ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಅಂಕಿತ್ ಶರ್ಮಾ ಫೆ.15ರಂದು ಹೆಣವಾಗಿ ಪತ್ತೆಯಾಗಿದ್ದರು. ಹಿಂಸಾಚಾರವನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಮತ್ತು ಕೇಂದ್ರ ಸರ್ಕಾರ, ಗಲಭೆಯಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ನೂರಾರು ಜನರನ್ನು ಈಗಾಗಲೇ ಬಂಧಿಸಿದೆ.
ಗಲಭೆಯ ಕುರಿತ ತನಿಖೆ ಚುರುಕುಗೊಂಡಿದ್ದು, ಹಿಂಸಾಚಾರದ ಹಿಂದಿರುವ ಶಂಕಿತ ಪ್ರಧಾನ ಪಿತೂರಿದಾರಿಗಳ ಒಂದೊಂದೇ ಹೆಸರುಗಳು ಬಯಲಾಗುತ್ತಿವೆ. 'ತಮ್ಮ ಮಗನ ಹತ್ಯೆಯ ಹಿಂದೆ ದೆಹಲಿ ಆಡಳಿತರೂಢ ಆಪ್ ಕಾರ್ಪೊರೇಟರ್ ಹಾಜಿ ತಹೀರ್ ಹುಸೇನ್ ಕೈವಾಡ ಇದೆ' ಎಂದು ಶರ್ಮಾ ಪೋಷಕರು ಆರೋಪಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.