ನವದೆಹಲಿ :ರೈತರ ಹೋರಾಟವನ್ನು ಬೆಂಬಲಿಸಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕರು ವಿಧಾನಸಭೆಯಲ್ಲಿ ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದು ಹಾಕಿದರು.
ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ :
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರುದ್ಧ ಆಪ್ ಸರ್ಕಾರ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ಬಿಜೆಪಿ ಚುನಾವಣೆಗಾಗಿ ಹಣ ಸಂಗ್ರಹಿಸಲು ಈ ಕಾನೂನುಗಳನ್ನು ಮಾಡಿದೆಯೇ ಹೊರತು, ರೈತರಿಗಲ್ಲ. ಹೊಸ ಕೃಷಿ ಕಾನೂಗಳ ಪ್ರತಿಯನ್ನು ಹರಿದು ಹಾಕುವುದರಲ್ಲಿ ನನಗೆ ನೋವಿದೆ, ನಾನು ಇದನ್ನು ಉದ್ದೇಶಿಸಿರಲಿಲ್ಲ. ಆದರೆ, -2 ಡಿಗ್ರಿ ಸೆಲ್ಸಿಯಸ್ ಇರುವ ತಾಪಮಾನದಲ್ಲಿ ಬೀದಿಗಳಲ್ಲಿ ಮಲಗಿರುವ ನನ್ನ ದೇಶದ ರೈತರಿಗೆ ನಾನು ದ್ರೋಹ ಮಾಡಲು ಸಾಧ್ಯವಿಲ್ಲ. ನಾನು ಮೊದಲು ಈ ದೇಶದ ಪ್ರಜೆ, ನಂತರ ಮುಖ್ಯಮಂತ್ರಿ ಎಂದು ಭಾವನಾತ್ಮಕವಾಗಿ ಹೇಳಿದರು.
ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ಕೋವಿಡ್ ಸಮಯದಲ್ಲಿ ಕೃಷಿ ಕಾನೂನು ಅಂಗೀಕರಿಸುವ ಆತುರವೇನಿತ್ತು..?
ಈ ವಿಧಾನಸಭೆ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ತಿರಸ್ಕರಿಸುತ್ತದೆ ಮತ್ತು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತದೆ. ಕೋವಿಡ್ ಸಮಯದಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ ಆತುರ ಏನಿತ್ತು..? ರಾಜ್ಯಸಭೆಯಲ್ಲಿ ಮಂಡಿಸದೇ ಮೂರು ಕಾನೂನುಗಳನ್ನು ಜಾರಿಗೆ ತಂದಿರುವುದು ಇದೇ ಮೊದಲ ಬಾರಿಯಾಗಿದೆ. ಆದ್ದರಿಂದ ನಾವು ಕೃಷಿ ಕಾನೂನುಗಳ ಪ್ರತಿಗಳನ್ನು ವಿಧಾನಸಭೆಯಲ್ಲಿ ಹರಿದು ಹಾಕುತ್ತಿದ್ದೇವೆ. ಕೇಂದ್ರದ ಕಾನೂನುಗಳು ಬ್ರಿಟಿಷ್ ಕಾನೂನಿಗಿಂತ ಕೆಟ್ಟದ್ದಾಗಿರಬಾರದು ಎಂದು ಮನವಿ ಮಾಡುತ್ತೇನೆ ಎಂದು ಕೃಷಿ ಕಾನೂನುಗಳ ಪ್ರತಿಗಳನ್ನು ಕೇಜ್ರಿವಾಲ್ ಹರಿದು ಹಾಕಿದರು.
ರೈತರು ಇನ್ನೆಷ್ಟು ತ್ಯಾಗ ಮಾಡಬೇಕು..?
ದೆಹಲಿ ಗಡಿಗಳ ಬಳಿ ಪ್ರತಿಭಟನೆಯಲ್ಲಿ ಕುಳಿತಿದ್ದ ರೈತರ ಸಾವಿನ ವಿಷಯವನ್ನು ಪ್ರಶ್ನಿಸಿದ ಕೇಜ್ರಿವಾಲ್, ರೈತರು ತಮ್ಮ ಧ್ವನಿಯನ್ನು ಕೇಳುವಂತೆ ಮಾಡಲು ಎಷ್ಟು ತ್ಯಾಗಗಳನ್ನು ಮಾಡಬೇಕೆಂದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಕೇಜ್ರವಾಲ್ ಊಸರವಳ್ಳಿ : ಲೇಖಿ ವಾಗ್ದಾಳಿ
ದೆಹಲಿ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ನವೆಂಬರ್ 23 ರಂದು ದೆಹಲಿ ಸರ್ಕಾರ ತನ್ನ ಗೆಜೆಟ್ನಲ್ಲಿ ಕೇಂದ್ರದ ಹೊಸ ಕೃಷಿ ಕಾನೂನುಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈಗ ವಿಧಾನಸಭೆಯಲ್ಲಿ ಸಿಎಂ ಮತ್ತು ಶಾಸಕರು ಕಾನೂನಿನ ಪ್ರತಿಯನ್ನು ಹರಿದು ಹಾಕಿದ್ದಾರೆ. ಇದು ಅವಕಾಶವಾದಿ ರಾಜಕೀಯ, ದೆಹಲಿ ಸಿಎಂ ಊಸರವಳ್ಳಿ ತರ. ಅವರು ಬಣ್ಣವಿಲ್ಲದೇ ಬಣ್ಣ ಬದಲಾಯಿಸುವವರು ಎಂದು ವಾಗ್ದಾಳಿ ನಡೆಸಿದ್ದಾರೆ.