ನವದೆಹಲಿ: ಹಿಂದೆ ಶಾಹೀನ್ ಬಾಗ್‌ನಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಭಾಗವಾಗಿದ್ದ ಮೂವರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ದೆಹಲಿಯ ಆಡಳಿತಾರೂಢ ಎಎಪಿ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಕಾರ್ಯಕರ್ತರಾದ ಶಹಜಾದ್ ಅಲಿ, ಡಾ.ಮೆಹ್ರೀನ್ ಮತ್ತು ತಬಸ್ಸುಮ್ ಹುಸೇನ್ ಅವರು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಕೆಲವು ತಿಂಗಳುಗಳ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಡಿ.15 ರಿಂದ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಬಿಜೆಪಿ ಸೇರಿರುವ ಬಗ್ಗೆ ಮಾತನಾಡಿರುವ ಅಲಿ, ಬಿಜೆಪಿ ಮುಸ್ಲಿಮ್ ಸಮುದಾಯದ ವಿರೋಧಿ ಪಕ್ಷವಲ್ಲ ಎಂಬುದನ್ನು ಸಾಬೀತುಪಡಿಸಲು ತಾವು ಈ ಪಕ್ಷ ಸೇರಿರುವುದಾಗಿ ಸ್ಪಷ್ಟನೆ ನೀಡಿದರು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಆಪ್ ವಕ್ತಾರ ಸೌರಭ್ ಭರದ್ವಾಜ್, ಈ ಕಾರ್ಯಕರ್ತರು ಬಿಜೆಪಿ ವಿರುದ್ಧ ನಡೆದ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಅಡಗಿಕೊಂಡಿದ್ದರು ಎಂದು ಆರೋಪಿಸಿದರು.
ಶಾಹೀನ್ ಬಾಗ್ ಚಕ್ರವ್ಯೂಹ ಬಿಜೆಪಿಯಿಂದ ರಚಿತವಾಗಿದ್ದು. ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದ ಜನರು ಕೇಸರಿ ಪಕ್ಷದ ಭಾಗವಾಗಿದ್ದರೇ ಎಂದು ಪ್ರಶ್ನಿಸಿದರು.
ಶಾಹೀನ್ ಬಾಗ್ ಪ್ರತಿಭಟನಾಕಾರರ ಬಗ್ಗೆ ಬಿಜೆಪಿಯ ಬೆಂಬಲಿಗರು ತೀವ್ರವಾಗಿ ಟೀಕಿಸುತ್ತಿದ್ದರು. ಈಗ ಅವರೆಲ್ಲ ಬಿಜೆಪಿಯ ಭಾಗವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಹೀನ್ ಬಾಗ್‌ನಲ್ಲಿ ನಡೆದ ಗಲಭೆಯನ್ನು ದಿನವಿಡೀ ಟಿವಿಯಲ್ಲಿ ತೋರಿಸುವ ಮೂಲಕ ಎರಡೂ ಸಮುದಾಯಗಳು ಸಾಕಷ್ಟು ಪ್ರಚೋದನೆಗೆ ಒಳಗಾದವು. ದೆಹಲಿಯ ಸಂಪೂರ್ಣ ಚುನಾವಣೆಯು ಶಾಹೀನ್ ಬಾಗ್ ಮೇಲೆ ಕೇಂದ್ರೀಕೃತವಾಗಿ ಕೆಟ್ಟದಾಗಿ ಸೋತಿದೆ. ದೆಹಲಿಯಲ್ಲಿ ಪ್ರತಿಭಟನೆಗಳು ನಡೆದು ಗಲಭೆಗಳು ಸಂಭವಿಸಿದವು. ಇದರಲ್ಲಿ 53 ಮಂದಿ ಮೃತಪಟ್ಟರು. ಈಗ ಶಾಹೀನ್ ಬಾಗ್ ಪ್ರತಿಭಟನಾಕಾರರು ಬಿಜೆಪಿಗೆ ಸೇರಿದರು ಎಂದು ಟ್ವೀಟ್ ಮಾಡಿದ್ದಾರೆ.