ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ರಾಷ್ಟ್ರ ರಾಜಧಾನಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 70ರಲ್ಲಿ 63 ಸ್ಥಾನ ಗೆದ್ದು ಬೀಗಿದೆ.
ಒಂಬತ್ತು ವರ್ಷಗಳ ಹಿಂದೆ ಕೇಜ್ರಿವಾಲ್ ಅವರು 2011ರಲ್ಲಿ ಲೋಕಪಾಲ್ ಮಸೂದೆಗಾಗಿ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಅಣ್ಣಾ ಹಜಾರೆ ಅವರ ಬೆನ್ನಿಗೆ ನಿಂತಿದ್ದರು. ಈ ಅಸ್ತ್ರವನ್ನೇ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ದೆಹಲಿ ಜನರ ಮನೆಮಾತಾದರು. ರಾಜಕೀಯ ರಂಗ ಪ್ರವೇಶ ಮಾಡುವುದಕ್ಕೂ ಮುನ್ನ, ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದರು.
ಪಕ್ಷದ ಸ್ಥಾಪನೆ: ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಸ್ಥಾಪಿಸಿದ್ದು 2012ರಲ್ಲಿ. 2013 ಡಿಸೆಂಬರ್ನಲ್ಲಿ ದೆಹಲಿಗೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ನ ಶೀಲಾ ದೀಕ್ಷಿತ್ ಅವರನ್ನೇ ಸೋಲಿಸಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ, ಆಗ ಕೇವಲ 49 ದಿನಗಳ ಕಾಲ ಮಾತ್ರ ಕುರ್ಚಿಯಲ್ಲಿದ್ದರು.
ಎಎಪಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸುವ ಅವರ ಮಹತ್ವಾಕಾಂಕ್ಷೆ ಕನಸು ನನಸಾಗಲಿಲ್ಲ. ಆದರೂ ಛಲಬಿಡದ ಅವರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರಿಗೆ ಸವಾಲಾಗಿ ಕಾಡಿದರು. ರಾಷ್ಟ್ರ ರಾಜಕಾರಣವನ್ನು ಅಮೂಲಾಗ್ರವಾಗಿ ಬದಲಾಯಿಸುವ ಮುನ್ಸೂಚನೆ ರೀತಿ 2015ರಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಬಹುಮತ ಪಡೆದಿತು.
2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಸ್ಥಾನ ಪಡೆಯುವ ಮೂಲಕ ಎಎಪಿ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಮುಖಭಂಗ ಮಾಡಿತು. ಈ ಮೂಲಕ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರಕ್ಕೆ ಬರುವ ಆಸೆ ಹೊಂದಿದ್ದ ಬಿಜೆಪಿ ಕೇವಲ 3 ಸ್ಥಾನ ಪಡೆದುಕೊಂಡಿತು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತು. ಹೀಗಾಗಿ ಅಂದು ಭಾರತದ ರಾಜಕೀಯ ಇತಿಹಾಸದಲ್ಲಿ ಇದೊಂದು ಪ್ರಮುಖ ನಿರ್ಣಾಯಕ ಪರ್ವ ಎಂದು ಹೇಳಲಾಗಿತ್ತು.
ಜನನ:ಹರಿಯಾಣದ ಹಿಸ್ಸಾರ್‌ನಲ್ಲಿ ಗೋಬಿಂದ್ ರಾಮ್ ಕೇಜ್ರಿವಾಲ್ ಹಾಗೂ ಗೀತಾ ದೇವಿ ಅವರ ಪುತ್ರನಾಗಿ ಅಗಸ್ಟ್ 16ರಂದು 1968ರಲ್ಲಿ ಜನಿಸಿದರು. ತಂದೆ ಎಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದರು.
ವಿದ್ಯಾಭ್ಯಾಸ:ಹಿಸ್ಸಾರ್‌ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಅವರು, ಖರಗ್‌ಪುರದ ಪ್ರತಿಷ್ಠಿತ ಐಐಟಿಯಲ್ಲಿ 1989ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದರು. ಆ ವರ್ಷವೇ ಟಾಟಾ ಸ್ಟೀಲ್ ಕಂಪನಿಯಲ್ಲಿ ವಾರ್ಷಿಕ ವರಮಾನ ₹5-6 ಲಕ್ಷ ಬರುವ ಕೆಲಸ ಗಿಟ್ಟಿಸಿಕೊಂಡರಾದರೂ 1992ರಲ್ಲಿ ಆ ಕೆಲಸಕ್ಕೆ ವಿದಾಯ ಹೇಳಿದರು. ಬಳಿಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು 1995ರಲ್ಲಿ ಕಂದಾಯ ಇಲಾಖೆ ಕೆಲಸಕ್ಕೆ ಸೇರಿಕೊಂಡರು. ಕೆಲಸ ಪಡೆದ ನಂತರ ಅವರ ಬ್ಯಾಚ್ಮೇಟ್ ಆಗಿದ್ದ ಸುನೀತಾ ಅವರನ್ನು ವಿವಾಹವಾದರು. ಈಗವರಿಗೆ ಇಬ್ಬರು ಮಕ್ಕಳಿದ್ದಾರೆ.
ಸಂಘ ಸ್ಥಾಪನೆ: ಸಮಾಜ ಸೇವಾ ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಸರ್ಕಾರಿ ಕಚೇರಿಗಳಲ್ಲಿ ಹಾಗೂ ರಾಜಕಾರಿಣಿಗಳ ಭ್ರಷ್ಟಾಚಾರ ಮಿತಿಮೀರಿದ ಮಟ್ಟದಲ್ಲಿ ಇರುವುದನ್ನು ಕಂಡರು. ಬಳಿಕ ಅದರ ವಿರುದ್ಧ ಹೋರಾಡಲು ಮತ್ತು ಜಾಗೃತಿ ಮೂಡಿಸುವ ಸಲುವಾಗಿ 2006ರಲ್ಲಿ ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಹೀಗಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಲೆಂದೇ 'ಪರಿವರ್ತನ' ಸಂಘ ಹುಟ್ಟು ಹಾಕಿದರು.
ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ: ಪಾರದರ್ಶಕ ಹಾಗೂ ನ್ಯಾಯಸಮ್ಮತ ಆಡಳಿತ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದು ಈ ಸಂಘದ ಉದ್ದೇಶವಾಗಿತ್ತು. ಹಲವು ಹೋರಾಟಗಾರರ ಜೊತೆಗೂಡಿ ಸರ್ಕಾರದ ವಿರುದ್ಧ ಸಿಡಿದೆದ್ದರು. ಅವರ ಹೋರಾಟಕ್ಕೆ ಮಣಿದ ಸರ್ಕಾರ ಆಗ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೆ ತಂದಿತ್ತು. ದೇಶಾದ್ಯಂತ ಸಂಚರಿಸಿ ಆರ್‌ಟಿಐ ಮಹತ್ವವನ್ನು ಜನರಿಗೆ ಮುಟ್ಟಿಸಿ ಯಶಸ್ವಿಯಾದರು. ಈ ರೀತಿಯ ಸಮಾಜಪರ ಕಾರ್ಯ ನಡೆಸಿದ ಅವರಿಗೆ ಆ ವರ್ಷದ (2006) 'ರಾಮನ್ ಮ್ಯಾಗ್ಸೆಸ್ಸೆ' ಪ್ರಶಸ್ತಿಯೂ ಒಲಿದು ಬಂದಿತ್ತು.
ಅಭಿವೃದ್ಧಿ ಹರಿಹಾರ: 2015ರಲ್ಲಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್, ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವಿದ್ಯುತ್ (24x7), 1.4 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು 20,000 ಲೀಟರ್ ನೀರು ಉಚಿತವಾಗಿ ವಿತರಿಸಿದ್ದರು. ಅಷ್ಟೇ ಅಲ್ಲ, ದೆಹಲಿಯಲ್ಲಿ ಎಂದೂ ಕಾಣದ ರೀತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಅವರ ಅಭಿವೃದ್ಧಿ ಕಾರ್ಯಗಳೇ ಮತ್ತೆ ಅಧಿಕಾರಕ್ಕೇರುವಂತೆ ಮಾಡಿವೆ. ಮೊದಲು ನೀಡಿದ್ದ ಯೋಜನೆಗಳನ್ನು ಪ್ರಚಾರದ ಭಾಗವಾಗಿಟ್ಟುಕೊಂಡು ಭರ್ಜರಿ ಜಯ ಗಳಿಸಿದರು. ಪ್ರಣಾಳಿಕೆಯಲ್ಲೂ ಆ ಯೋಜನೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಇನ್ನೂ ನೂತನ ಯೋಜನೆಗಳನ್ನು ಜನರ ಮುಂದಿಟ್ಟಿದ್ದಾರೆ.