ನವದೆಹಲಿ:ದೇಶೀಯ ವಿಮಾನಗಳು ಮೇ 25ರಿಂದ ಹಾರಾಟ ನಡೆಸುವ ಸಾಧ್ಯತೆ ಹೆಚ್ಚಿದ್ದು, ವಿಮಾನ ನಿಲ್ದಾಣದ ನಿರ್ವಾಹಕರಿಗೆ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಬುಧವಾರ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಅಂಶಗಳ ಕುರಿತು ತಿಳಿಸಲಾಗಿದೆ.
ಅದರಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯವಲ್ಲ. ಅದಕ್ಕೂ ಮೇಲ್ಪಟ್ಟ ವಯಸ್ಸಿನವರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ (ಟರ್ಮಿನಲ್ಗೆ) ಮುನ್ನ ಗೊತ್ತುಪಡಿಸಿದ ಜಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು.
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಿಮಾನ ಹೊರಡುವುದಕ್ಕೆ ಎರಡು ಗಂಟೆ ಮೊದಲು ನಿಲ್ದಾಣಕ್ಕೆ ತಲುಪಿರಬೇಕು. ವಿಮಾನ ಹಾರಾಟಕ್ಕೂ ನಾಲ್ಕು ಗಂಟೆ ಮುಂಚೆ ಪ್ರಯಾಣಿಕರನ್ನು ನಿಲ್ದಾಣದೊಳಗೆ ಬಿಡಲಾಗುತ್ತದೆ. ತದ ನಂತರ ಬಂದರೆ ಅವಕಾಶ ನೀಡುವುದಿಲ್ಲ.
ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು. ಎಲ್ಲಾ ಸಿಬ್ಬಂದಿ ಕೈಯಲ್ಲಿ ಸ್ಯಾನಿಟೈಸರ್ ಮತ್ತು ಪಿಪಿಇ ಹೊಂದಿರಬೇಕು. ಟರ್ಮಿನಲ್ನ ಎಲ್ಲಾ ಪ್ರವೇಶ ಗೇಟ್ಗಳನ್ನು ತೆರೆಯಲಾಗುತ್ತದೆ. ಪ್ರಯಾಣಿಕರ ಲಗೇಜುಗಳನ್ನು ಸ್ವಚ್ಛಗೊಳಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಪ್ರವೇಶ ದ್ವಾರದಲ್ಲಿ ಮ್ಯಾಟ್ ಮತ್ತು ಕಾರ್ಪೆಟ್ಗಳನ್ನು ಬ್ಲೀಚ್ ಗಳಿಂದ ಸ್ವಚ್ಛ ಮಾಡಿರಬೇಕು.
ಪ್ರಯಾಣಿಕರೊಂದಿಗೆ ಮಾತುಕತೆ ನಡೆಸುವಾಗ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರಿಗೆ ಓದಲು ಟರ್ಮಿನಲ್ಗಳಲ್ಲಿ ಪತ್ರಿಕೆ, ಮ್ಯಾಗಜಿನ್ ಇಡುವಂತಿಲ್ಲ. ಜ್ವರ, ಕೆಮ್ಮು, ಕಫ, ಉಸಿರಾಟದ ತೊಂದರೆ ಇರುವ ಸಿಬ್ಬಂದಿಯನ್ನು ಒಳಗೆ ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ. ಇದು ಪ್ರಯಾಣಿಕರಿಗೂ ಅನ್ವಯವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಪ್ರಯಾಣಿಕರನ್ನು ವಿಭಾಗ ಮಾಡಿ ತಪಾಸಣೆ ಮಾಡಿ ಹೊರ ಬಿಡಬೇಕು.