ಕರ್ನಾಟಕ

karnataka

ETV Bharat / bharat

ಕಾಡಿದ ಅನಾರೋಗ್ಯ: ಮಗುವಿನ ನರಳಾಟ ನೋಡದೆ ಕರುಳ ಕುಡಿಯನ್ನೇ ಮಹಡಿಯಿಂದ ಎಸೆದ ತಾಯಿ! - treatment

ಮಹಿಳೆಯೊಬ್ಬಳು ತನ್ನ 3 ತಿಂಗಳ ಮಗುವನ್ನು ಆಸ್ಪತ್ರೆಯ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ. ಮಗುವಿನ ಚಿಕಿತ್ಸೆಯಿಂದ ಬೇಸತ್ತ ಮಹಿಳೆ ಈ ಭೀಕರ ಕೃತ್ಯ ಎಸಗಿದ್ದಾಳೆ.

mother

By

Published : Jul 23, 2019, 6:19 PM IST

ಲಕ್ನೋ (ಉ.ಪ್ರ): ತಾಯಿಯೇ ತನ್ನ 3 ತಿಂಗಳ ಮಗುವನ್ನು ಆಸ್ಪತ್ರೆಯ ಮಹಡಿಯಿಂದ ಕೆಳಗೆ ಎಸೆದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಪಿತ್ತಜನಕಾಂಗದ ಕಾಯಿಲೆ ಹಾಗೂ ಕಾಮಾಲೆ ರೋಗದಿಂದ ಮಗು ಬಳಲುತ್ತಿದ್ದು, ಅದರ ಚಿಕಿತ್ಸೆಯಿಂದ ತಾಯಿ ಬೇಸತ್ತಿದ್ದಳು.

ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಅಪಘಾತ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ನಾಲ್ಕನೇ ಮಹಡಿಯಿಂದ ಮಹಿಳೆ ಮಗುವನ್ನು ಎಸೆದಿದ್ದಾಳೆ. ಮಹಿಳೆಯ ಪತಿ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪರಿಶೀಲನೆ ನಡೆಸುತ್ತಿರುವ ಪೊಲೀಸರು

"ತಮ್ಮ ಮಗನ ನಿರಂತರ ವೈದ್ಯಕೀಯ ಚಿಕಿತ್ಸೆಯಿಂದ ಆಕೆ ಬೇಸತ್ತು, ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದಿದ್ದಾಳೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಮಹಿಳೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.

ಪತಿ ಹಾಗೂ ಬಾವ ರಾತ್ರಿ ನಿದ್ರಿಸುತ್ತಿದ್ದ ಸಮಯದಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಬಳಿಕ ತನ್ನ ಮಗು ನಾಪತ್ತೆಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ಮಗುವನ್ನು ಕದಿಯಲು ಯತ್ನಿಸಿದ್ದಾರೆ ಎಂದು ದೂಷಿಸಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅದರಲ್ಲಿ ಮಗುವನ್ನು ಮಹಿಳೆಯೇ ಬಾಲ್ಕನಿಯಿಂದ ಎಸೆದಿರುವುದನ್ನು ಕಂಡು ಆಕೆಯನ್ನು ಬಂಧಿಸಿದ್ದಾರೆ.

ಗೋರಖ್​ಪುರದ ಬಿಆರ್​ಡಿ ವೈದ್ಯಕೀಯ ಕಾಲೇಜಿನಲ್ಲಿ ಏಪ್ರಿಲ್​ 23ರಂದು ಜನಿಸಿದ್ದ ಮಗುವಿನಲ್ಲಿ ಜಾಂಡಿಸ್​ನ ಲಕ್ಷಣಗಳು ಕಂಡು ಬಂದಿದ್ದವು. ಮೇ 26ರಂದು ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಲಿವರ್​ಗೆ ಹಾನಿಯಾಗಿದ್ದು, ಬದುಕುಳಿಯುವುದು ಕಷ್ಟ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಬಳಿಕ ಮಗುವಿನ ತಾಯಿ ಈ ಕೃತ್ಯ ಎಸಗಿದ್ದಾಳೆ.

ABOUT THE AUTHOR

...view details