ಉಜ್ಜೈನಿ : ಮಗನಿಗಿರುವ ಕ್ಯಾನ್ಸರ್ ಗುಣಪಡಿಸುತ್ತೇನೆಂದು ಸುಳ್ಳು ಹೇಳಿ ಉಜ್ಜೈನಿ ಮೂಲದ ಡೋಂಗಿ ಬಾಬಾವೊಬ್ಬ ಮಹಿಳೆ ಮೇಲೆ ಅತ್ಯಾಚಾರಗೈದು, ಆಕೆಯಿಂದ ಬರೋಬ್ಬರಿ 3.5ಲಕ್ಷ ರೂ. ಹಣ ದೋಚಿರುವ ಘಟನೆ ನಡೆದಿದೆ.ಮುಂಬೈ ಮೂಲದ 41 ವರ್ಷದ ಮಹಿಳೆ ಮೇಲೆ ಬಾಬಾ ಈ ಕೃತ್ಯವೆಸಗಿದ್ದಾನೆ. ಸಂತ್ರಸ್ತೆಯ ಮಗನಿಗಿದ್ದ ಕ್ಯಾನ್ಸರ್ ಗುಣಪಡಿಸಲು ಕೆಲವೊಂದು ಧಾರ್ಮಿಕ ಆಚರಣೆ ಮಾಡಬೇಕಾಗಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕೆಂದು ನಂಬಿಸಿದ್ದ. ಅದೇ ರೀತಿ ಹಣ ಪಡೆದು ವಂಚಿಸಿದ್ದಾನೆ ಅಂತ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈಗಮಗ ಸಾವನ್ನಪ್ಪಿದ್ದು, ದಂಪತಿ ಬರೋಬ್ಬರಿ 3.5 ಲಕ್ಷ ರೂ. ಕೂಡ ಕಳೆದುಕೊಂಡಿದ್ದಾರೆ.
ಡೋಂಗಿ ಬಾಬಾನಿಂದ ಮಹಿಳೆ ಮೇಲೆ ರೇಪ್ ಘಟನೆಯ ಹಿನ್ನೆಲೆ :
2017ರಿಂದ ಕ್ಯಾನ್ಸರ್ ಕಾಯಿಲೆಗೆ ಈ ದಂಪತಿ ಮಗ ತುತ್ತಾಗಿದ್ದನು. ಚಿಕಿತ್ಸೆಗಾಗಿ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿ ನೀಡುತ್ತಿದ್ದ ಟ್ರಿಟ್ಮೆಂಟ್ ಅವರಿಗೆ ತೃಪ್ತಿ ನೀಡಿರಲಿಲ್ಲ. ಅದೇ ವರ್ಷದ ಮೇ ತಿಂಗಳಲ್ಲಿ ಕ್ಯಾನ್ಸರ್ ಪೀಡಿತನ ತಾಯಿ ದೇವಾಲಯವೊಂದರಲ್ಲಿ ಡೋಂಗಿ ಬಾಬಾಗೆ ಭೇಟಿಯಾಗಿದ್ದಾರೆ. ಈ ವೇಳೆ ಕೆಲವೊಂದು ಆಚರಣೆಗಳಿಂದ ಮಗನಿಗಿರುವ ಕಾಯಿಲೆ ದೂರು ಮಾಡುವುದಾಗಿ ಆತ ಭರವಸೆ ನೀಡಿದ್ದಾನೆ. ಜತೆಗೆ ಮನೆಯಲ್ಲಿ ಯಜ್ಞ ನಡೆಸಬೇಕೆಂದು ಹೇಳಿದ್ದಾನೆ.
ಅದೇ ರೀತಿ ದಂಪತಿ ಮನೆಯಲ್ಲಿ ಹೋಮ-ಹವನ ಮಾಡಲು ಅವಕಾಶ ನೀಡಿದ್ದಾರೆ. ಈ ವೇಳೆ ಬಾಬಾ ದಂಪತಿಗೆ ಕುಡಿಯುವ ನೀರಿನಲ್ಲಿ ಮತ್ತು ಬರುವ ಪದಾರ್ಥ ನೀಡಿದ್ದಾನೆ. ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಮಹಿಳೆ ಮೇಲೆ ಅತ್ಯಾಚಾರಗೈದು, ಅದರ ವಿಡಿಯೋ ಮಾಡಿದ್ದಾನೆ. ಜತೆಗೆ ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಇದಾದ ಬಳಿಕ ಮಹಿಳೆಗೆ ಮೇಲಿಂದ ಮೇಲೆ ಹಣ ನೀಡುವಂತೆ ಕಾಡಿಸಿದ್ದಾನೆ. ಹಣ ನೀಡಿಲ್ಲವಾದ್ರೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಅವರು ಬೇರೆ ಹಾದಿಯಿಲ್ಲದೇ ಇಷ್ಟೊಂದು ಹಣ ನೀಡಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಈಗ ಡೋಂಗಿಬಾಬಾನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ.