ದೆಹಲಿ:ಇಂದು ಬೆಳಿಗ್ಗೆ ದೆಹಲಿಯನ್ನು ಮತ್ತೆ ವಿಷಕಾರಿ ಹೊಗೆ ಕಾಡಿದ್ದು, ರಾಷ್ಟ್ರರಾಜಧಾನಿ ಪೂರ್ತಿಯಾಗಿ ಹೊಗೆಯ ಹೊದಿಕೆ ಹಾಸಿದಂತೆ ಭಸಾವಾಗುತ್ತಿದೆ. ಆಫ್ರಿಕಾ ಅವೆನ್ಯೂ ರಸ್ತೆ ಮತ್ತು ವಸಂತ್ ವಿಹಾರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಷಕಾರಿ ಹೊಗೆಯು ಮಂಜಿನಂತೆ ಕಾಣುತ್ತಿದೆ. ದೆಹಲಿಯ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿದ್ದು ರಾಜ್ಯ ಸರ್ಕಾರ ಈಗಾಗಲೇ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿದೆ.
ಇಂದು ಬೆಳಗ್ಗೆ ನೋಯ್ಡಾದ ನಾಲೆಡ್ಜ್ ಪಾರ್ಕ್‌ನ 3 ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 458 ಹಾಗೂ ನೋಯ್ಡಾ ಸೆಕ್ಟರ್ 62ನಲ್ಲಿ 472 ಸೂಚ್ಯಂಕ ತಲುಪಿದೆ. ಹಾಗೆಯೇ ಜವಾಹರಲಾಲ್ ನೆಹರು ಕ್ರೀಡಾಂಗಣದ ಸುತ್ತ 457, ಮತ್ತು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ 460 ಸೂಚ್ಯಾಂಕ ತಲುಪಿದ್ದು, ವಾಯುವಿನ ಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ.
ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, 0 ರಿಂದ 50 ಉತ್ತಮ, 51ರಿಂದ 100 ತೃಪ್ತಿದಾಯಕ, 101ರಿಂದ 200 ಮಧ್ಯಮ, 201ರಿಂದ 300 ಕಳಪೆ, 301ರಿಂದ 400 ಅತೀ ಕಳಪೆ, 401ರಿಂದ 500 ಅಪಾಯಕಾರಿ, 500 ನಂತರ ಅತೀ ಅಪಾಯಕಾರಿ ಎಂದು ವಿಂಗಡಿಸಲಾಗಿದೆ.
ಇಂದು ಬೆಳಿಗ್ಗೆ ಜನರು ಮಾಸ್ಕ್ ಧರಿಸಿ ವಾಕಿಂಗ್‌ಗೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಮಾಸ್ಕ್ ಧರಿಸಿ ಜನರ ವಾಕಿಂಗ್
ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ವಿಷಕಾರಿ ಗಾಳಿಯನ್ನು ನಿಯಂತ್ರಿಸಲು ಫಿರೋಜ್ ಷಾ ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ನೀರು ಚಿಮ್ಮುಸುವ ಕಾರ್ಯ ಮಾಡಿತು. ಅಧಿಕ ವಾಯು ಮಾಲಿನ್ಯವಿರುವ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದು, ಎಲ್ಲರಿಗೂ ಉಚಿತವಾಗಿ ಮಾಸ್ಕ್ ನೀಡಿ, ಸಾರ್ವಜನಿಕರು ತಮ್ಮ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಸೂಚಿಸಿದೆ.
ವಾಯು ಮಾಲಿನ್ಯ ನಿಯಂತ್ರಿಸಲು ನೀರು ಸಿಂಪಡಣೆ