ಹೈದರಾಬಾದ್:ನಕಲಿ ಮತ್ತು ಕಲಬೆರಕೆ ಉತ್ಪನ್ನಗಳನ್ನು ತಯಾರಿಸಿ ಮುಗ್ಧ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಳದಂಧೆಕೋರರಿಂದಾಗಿ ಕಲಿಯುಗ ಎಂಬುದು ಕಾರ್ಕೋಟಕ ಯುಗವಾಗಿ ಮಾರ್ಪಟ್ಟಿದೆ. ಸಾರ್ವಜನಿಕ ಆರೋಗ್ಯ ನೀತಿಯನ್ನು ಗಾಳಿಗೆ ತೂರಿ ಈ ಗ್ಯಾಂಗ್‌ಗಳು ಹೆಡೆ ಎತ್ತಿವೆ.
ಕೊರೊನಾ ಪಿಡುಗು ಜನರನ್ನು ಬಾಧಿಸತೊಡಗಿದಂತೆ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ದಂಧೆಕೋರ ಗ್ಯಾಂಗುಗಳು ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದು ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಸ್ಯಾನಿಟೈಜರ್‌ಗಳನ್ನು ತಯಾರಿಸುವ ವಿವಿಧ ಹುನ್ನಾರಗಳಲ್ಲಿ ಮುಳುಗಿವೆ.
ಚೀನಾ ಮತ್ತು ಬಾಂಗ್ಲಾದೇಶವು ಇಂತಹ ದುಷ್ಕರ್ಮಿಗಳನ್ನು ಗಲ್ಲಿಗೇರಿಸುತ್ತಿದ್ದರೆ, ಇಂಗ್ಲೆಂಡ್, ಬ್ರೆಜಿಲ್, ಫ್ರಾನ್ಸ್ ಮತ್ತು ಸ್ಪೇನ್ ಆಹಾರ ಸುರಕ್ಷತಾ ಮಾನದಂಡಗಳ ಕಣ್ಗಾವಲು ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಿವೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಪ್ರತಿರೋಧ ಒಡ್ಡುವಂತಹ ಅಂಶಗಳು ಇಲ್ಲದ ನ್ಯೂನತೆ ಬಳಸಿಕೊಂಡು ಅಂತಹ ಗ್ಯಾಂಗ್‌ಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಕಾನೂನು ಮತ್ತು ನಿಬಂಧನೆಗಳನ್ನು ಯಾವುದೇ ಅಡೆತಡೆ ಇಲ್ಲದಂತೆ ಸರಿಯಾಗಿ ಜಾರಿಗೊಳಿಸಿದಾಗ ಮಾತ್ರ ಅವು ಪರಿಣಾಮಕಾರಿಯಾಗಬಲ್ಲವು.
ಪ್ರಸ್ತುತ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗ್ನರಾಗಿದ್ದ ಈ ಧನದಾಹಿಗಳು ಈಗ ಕಾನೂನುಬಾಹಿರ ವ್ಯವಹಾರದ ಜೊತೆ ಕೈಜೋಡಿಸಿದ್ದಾರೆ. ಇದರಿಂದಾಗಿ ನಕಲಿ ಗ್ಯಾಂಗುಗಳನ್ನು ಮಟ್ಟಹಾಕಬೇಕಿದ್ದ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದ್ದ ದೇಶದ ಕಣ್ಗಾವಲು ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಇದೆಲ್ಲದರ ಮಧ್ಯೆ ಹಾಲು, ದ್ವಿದಳ ಧಾನ್ಯಗಳಿಂದ ಹಿಡಿದು ತೈಲ ಹಾಗೂ ಮಸಾಲೆ ಪದಾರ್ಥಗಳವರೆಗೆ ದೇಶದಲ್ಲಿ ಕಲಬೆರಕೆ ತಲೆಎತ್ತಲು ಕಾರಣವಾದ ಹಲವಾರು ಆಡಳಿತಾತ್ಮಕ ಮತ್ತು ವ್ಯವಸ್ಥೆಯ ನ್ಯೂನತೆಗಳ ಬಗ್ಗೆ ಸಿ ಎ ಜಿ ವರದಿ ಗಮನಸೆಳೆದಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದನ್ನೇ ಬಂಡವಾಳ ಮಾಡಿಕೊಂಡು ವಿವಿಧ ಗ್ಯಾಂಗುಗಳು ತಲೆ ಎತ್ತಿವೆ. ಸ್ಯಾನಿಟೈಜರ್‌ಗಳ ಒಟ್ಟಾರೆ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, 200 ಮಿಲಿ ಗ್ರಾಂನಷ್ಟು ದ್ರಾವಣಕ್ಕೆ 100 ರೂಪಾಯಿ ನಿಗದಿಪಡಿಸಬೇಕು ಎಂದು ಸುಮಾರು 5 ತಿಂಗಳ ಹಿಂದೆ ಖುದ್ದು ಕೇಂದ್ರ ಸರ್ಕಾರವೇ ಸೂಚಿಸಿದೆ.
ಈಥೈಲ್ ಆಲ್ಕೋಹಾಲ್, ಐಸೊಪ್ರೊಪಿಲ್ ಆಲ್ಕೋಹಾಲ್ ಮತ್ತು ಎನ್ ಪ್ರೊಪೈಲ್ ಆಲ್ಕೋಹಾಲ್ ಬಳಸಿ ಗುಣಮಟ್ಟದ ಸ್ಯಾನಿಟೈಜರ್ ತಯಾರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಕೆಲವೇ ವಾರಗಳಲ್ಲಿ, ನೋಯ್ಡಾ, ಜಮ್ಮು ಮತ್ತು ಕಾಶ್ಮೀರ, ಮುಂಬೈ, ವಡೋದರಾ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಗ್ಯಾಂಗುಗಳು ನಕಲಿ ಸ್ಯಾನಿಟೈಜರ್ ಉತ್ಪಾದನೆಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿತು. .
ಸಣ್ಣ ತನಿಖೆಯಿಂದ ಪತ್ತೆಯಾದ ದೊಡ್ಡ ಜಾಲ
ಪ್ರಕಾಶಂ, ಕಡಪಾ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ, ಮದ್ಯದ ಚಟಕ್ಕೆ ಒಳಗಾದ ಸುಮಾರು 50 ಜನರು ಮತ್ತಿನಲ್ಲಿ ಸ್ಯಾನಿಟೈಜರ್‌ಗಳನ್ನು ಸೇವಿಸಿ ಮೃತಪಟ್ಟರು. ಈ ಸಾವುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಿಂದಾಗಿ ಸ್ಯಾನಿಟೈಜರ್ ತಯಾರಿಕೆಯಲ್ಲಿ ನಡೆಯುತ್ತಿರುವ ಅಕ್ರಮ ಬಹಹಿರಂಗವಾಯಿತು.
ಮೆಥನಾಲ್ ಎಂಬ ರಾಸಾಯನಿಕ, ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ 10ರಿಂದ 15 ರೂಪಾಯಿಗೆ ದೊರೆಯುತ್ತದೆ. ದುಷ್ಕರ್ಮಿ ಗ್ಯಾಂಗ್‌ಗಳು ಇದನ್ನು ಇತರ ರಾಸಾಯನಿಕಗಳೊಂದಿಗೆ ಬೆರೆಸಿ ಕಲಬೆರಕೆ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು. ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ನಕಲಿ ಸರಕು ವ್ಯವಹಾರಗಳು ಈಗ ಗುಡಿಕೈಗಾರಿಕೆ ಮಾದರಿಯಲ್ಲಿ ಬೆಳೆದಿವೆ. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂಬ ಕಟ್ಟುಪಾಡಿನ ಸೋಗಿನಲ್ಲಿ ಈ ನಕಲಿ ವ್ಯಾಪಾರಿಗಳು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೇ ಲಾಭ ಮಾಡಿಕೊಳ್ಳುತ್ತಿರುವುದು ಅಚ್ಚರಿಯ ವಿಚಾರವಾಗಿದೆ.