ಪೂರ್ವ ಗೋದಾವರಿ:ಶುಕ್ರವಾರದಂದು ನಾಪತ್ತೆಯಾಗಿದ್ದ ಬಾಲಕಿ ರವಿವಾರದಂದು ಉಪ್ಪುಟೇರು ನದಿ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಕಿನಾಡಿನಲ್ಲಿ ನಡೆದಿದೆ.
ನಗರದ ನಿವಾಸಿ ಸತ್ಯಶ್ಯಾಮ್ ಪ್ರಸಾದ್ ಮಗಳು ದೀಪ್ತಿಶ್ರೀ ಸ್ಥಳೀಯ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಮಗುವಿನ ತಾಯಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಶ್ಯಾಮ್ ಪ್ರಸಾದ್ ಮತ್ತೊಂದು ಮದುವೆ ಮಾಡಿಕೊಂಡಿದ್ದರು. ಎರಡನೇ ಪತ್ನಿ ಶಾಂತಕುಮಾರಿ ಮತ್ತು ಆಕೆ ಮಗ ಇಬ್ಬರು ಸಂಜಯ್ ನಗರದಲ್ಲಿ ವಾಸಿಸುತ್ತಿದ್ದಾರೆ. ಶ್ಯಾಮ್ ಪ್ರಸಾದ್ ತನ್ನ ಮಗನಿಗೆ ಪ್ರಾಧಾನ್ಯತೆ ನೀಡುತ್ತಿಲ್ಲವೆಂದು ಶಾಂತಕುಮಾರಿ ಮಗಳು ದೀಪ್ತಿಶ್ರೀ ಮೇಲೆ ಅಸೂಯೆ ಪಡುತ್ತಿದ್ದಳು.
ಇನ್ನು ದೀಪ್ತಿಶ್ರೀ ತನ್ನ ಸೋದರ ಅತ್ತೆಯ ಜೊತೆ ಇರುತ್ತಿದ್ದಳು. ಶುಕ್ರವಾರ ಶಾಲೆಗೆ ತೆರಳಿದ್ದ ದೀಪ್ತಿಶ್ರೀ ಮಧ್ಯಾಹ್ನ ಊಟದ ಸಮಯದಲ್ಲಿ ಅಪಹರಣಕ್ಕೆ ಗುರಿಯಾಗಿದ್ದಳು. ಬಳಿಕ ಶ್ಯಾಮ್ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಬಾಲಕಿಗಾಗಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಮಲತಾಯಿ ಶಾಂತಕುಮಾರಿ ಜೊತೆ ದೀಪ್ತಿಶ್ರೀ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಮುಖ ಆರೋಪಿಯಾಗಿ ಶಾಂತಕುಮಾರಿಯನ್ನು ಪರಿಗಣಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಮಗಳನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿ ನದಿಗೆ ಎಸೆದಿರುವುದಾಗಿ ಹೇಳಿದ್ದಾಳೆ.
ಆರೋಪಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಮಗುವಿನ ಬಗ್ಗೆ ಪತ್ತೆ ಹಚ್ಚಿದ್ದರು. ನದಿಯಲ್ಲಿ ಹುಡುಕಾಟ ನಡೆಸಿದಾಗ ಬಾಲಕಿ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹ ಕಂಡ ಆ ತಂದೆಯ ರೋದನೆ ಮುಗಿಲು ಮುಟ್ಟಿತ್ತು. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.