ಅನಂತಪುರಂ:ಮಗನ ಕ್ಷಣಿಕ ಆವೇಶಕ್ಕೆ ತಾಯಿಯೊಬ್ಬಳು ಬಲಿಯಾಗಿರುವ ಘಟನೆ ಅನಂತಪುರಂ ಜಿಲ್ಲೆಯ ಗುಂತಕಲ್ಲಿನ ತಿಲಕ್ ನಗರದಲ್ಲಿ ನಡೆದಿದೆ.
ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ! - ಗುಂತಕಲ್ಲು ಅಪರಾಧ ಸುದ್ದಿ
ಉದ್ಯೋಗ ಇಲ್ಲದೇ ಮನೆಯಲ್ಲಿ ಖಾಲಿ ಕುಳಿತಿದ್ದ ಮಗ ತನ್ನ ಹೆತ್ತ ತಾಯಿಯನ್ನು ಕುಡಗೋಲಿನಿಂದ ತುಂಡರಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
![ಹೆತ್ತ ತಾಯಿಯನ್ನೇ ಕುಡಗೋಲಿನಿಂದ ತುಂಡರಿಸಿದ ನಿರುದ್ಯೋಗಿ ಮಗ!](https://etvbharatimages.akamaized.net/etvbharat/prod-images/768-512-4582684-390-4582684-1569669668220.jpg)
ಇಲ್ಲಿನ ನಿವಾಸಿ ಸಂಜಮ್ಮ (65)ರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆಕೆಯ ಗಂಡ ನರಸಿಂಹಲು ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಆ ಉದ್ಯೋಗ ಸಂಜಮ್ಮರ ಹಿರಿಯ ಮಗ ವೀರೂಪಾಕ್ಷಿಗೆ ಬಂದಿದೆ. ಆ ಸಮಯದಲ್ಲಿ ಕಿರಿಯ ಮಗ ಶ್ರೀನಿವಾಸ್ ಕರ್ನಾಟಕದ ಬಳ್ಳಾರಿಯ ಜಿಂದಾಲ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ.
ಶ್ರೀನಿವಾಸ್ ಹತ್ತು ತಿಂಗಳ ಹಿಂದೆ ಜಿಂದಾಲ್ ಫ್ಯಾಕ್ಟರಿಯಲ್ಲಿನ ಉದ್ಯೋಗ ತೊರೆದು ಮನೆಯಲ್ಲೇ ಕಾಲ ಕಳೆಯುತ್ತಿದ್ದನಂತೆ. ಈ ವಿಷಯಕ್ಕಾಗಿ ತಾಯಿ-ಮಗನ ಮಧ್ಯೆ ವಾಗ್ವಾದ ನಡೆದಿದೆ. ಕೋಪಗೊಂಡ ಶ್ರೀನಿವಾಸ್ ಕುಡಗೋಲಿನಿಂದ ಹೆತ್ತ ತಾಯಿಯನ್ನ 18 ಬಾರಿ ಕೊಚ್ಚಿ ತುಂಡರಿಸಿದ್ದಾನೆ. ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ ಶ್ರೀನಿವಾಸ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಕುರಿತು ಗುಂತಕಲ್ಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.