ನವದೆಹಲಿ: ಎ-ಸ್ಯಾಟ್ ಅಥವಾ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಯಶಸ್ವಿಯಾಗಿ ಪ್ರಯೋಗಿಸುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ.
ಈ ಮಹತ್ವದ ಯೋಜನೆ 2 ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದರೂ, ವ್ಯವಸ್ಥಿತ ರೂಪ ಸಿಕ್ಕಿದ್ದು 6 ತಿಂಗಳಿಂದ ಎಂದು ಡಿಆರ್ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ಗೆ ಈ ಪ್ರಯೋಗದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದೆವು. ಪ್ರಧಾನಿ ಮೋದಿ ಅವರ ಅನುಮತಿ ಮೇರೆಗೆ ದೋವಲ್ ನಮಗೆ ಅಗತ್ಯ ಸಲಹೆ ನೀಡುತ್ತಿದ್ದರು. ಯೋಜನೆಯ ಅಭಿವೃದ್ಧಿ ಕಾರ್ಯಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಕಳೆದ ಆರು ತಿಂಗಳಿಂದ ವ್ಯವಸ್ಥಿತ ರೂಪ ಪಡೆದುಕೊಂಡಿತು ಎಂದಿದ್ದಾರೆ ಸತೀಶ್ ರೆಡ್ಡಿ.
ಎ-ಸ್ಯಾಟ್ ಕುರಿತು ಡಿಆರ್ಡಿಒ ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ಮಾತು ಟಾರ್ಗೆಟ್ನಂತೆ ಉಡ್ಡಯನ ಮಾಡಲು ಆರು ತಿಂಗಳ ಕಾಲ 100 ವಿಜ್ಞಾನಿಗಳು ಅವಿರತ ಶ್ರಮಿಸಿದರು. ಇದರ ಫಲವಾಗಿ ಮೂರು ನಿಮಿಷಗಳಲ್ಲಿ ಜೀವಂತ ಸ್ಯಾಟಲೈಟ್ ಅನ್ನು ಬಾಹ್ಯಾಕಾಶದ 300 ಕಿ.ಮೀ ದೂರಕ್ಕೆ ಉಡ್ಡಯನ ಮಾಡಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿದರು.
ಬಾಹ್ಯಾಕಾಶದ ಸಂಪನ್ಮೂಲಗಳಿಗೆ ಹಾನಿಯಾಗಬಾರದೆಂದು 300 ಕಿ.ಮೀ ದೂರಕ್ಕೆ ಹಾರಿಸುವ ಟಾರ್ಗೆಟ್ ಇಟ್ಟುಕೊಂಡೆವು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇದು ‘Low Earth Orbit’ ಸ್ಯಾಟಲೈಟ್ಗಳನ್ನು ಮಾತ್ರ ಟಾರ್ಗೆಟ್ ಮಾಡಲಿದ್ದು, 1000 ಕಿ.ಮೀವರೆಗೆ ಮಾತ್ರ ತನ್ನ ವ್ಯಾಪ್ತಿ ಹೊಂದಿದೆ ಎಂದು ವಿವರಿಸಿದರು.
ನಿನ್ನೆ ಒಡಿಶಾದ ಬಾಲಸೋರ್ನಿಂದ ಬೆಳಗ್ಗೆ 11:16ಕ್ಕೆ ಎ-ಸ್ಯಾಟ್ ಕ್ಷಿಪಣಿ ಉಡಾವಣೆ ಮಾಡಲಾಯಿತು. ಮೂರೇ ನಿಮಿಷಗಳಲ್ಲಿ ಕ್ಷಿಪಣಿ ನಿಗದಿತ ಸ್ಥಳ ತಲುಪಿತ್ತು. ಭೂಮಿಯ ಮೇಲ್ಮೈನಿಂದ 300 ಕಿ.ಮೀ ದೂರದಲ್ಲಿ ಕ್ಷಿಪಣಿ ಕಾರ್ಯಾಚರಣೆ ನಡೆಸಲಿದೆ. ಈ ತಂತ್ರ ಜ್ಞಾನದಲ್ಲಿ ಭಾರತ ಸಹ ಅಮೆರಿಕ, ರಷ್ಯಾ ಹಾಗೂ ಚೀನಾದ ಸಾಲಿಗೆ ಸೇರಿದೆ.
ದೇಶದ ಸಂವಹನ ಜಾಲಕ್ಕೆ ತೊಂದರೆಯೊಡ್ಡುವ ಶತ್ರುಗಳ ಸ್ಯಾಟಲೈಟ್ಗಳನ್ನು ಹೊಡೆದುರುಳಿಸುವ ಕಾರ್ಯ ಈ ಕ್ಷಿಪಣಿಯದ್ದಾಗಿದೆ. ‘Kinetic kill’ ಮೂಲಕ ನೇರವಾಗಿ ಸ್ಯಾಟಲೈಟ್ ಮೇಲೆ ದಾಳಿ ನಡೆಯಲಿದ್ದು, ಇದು ಸಂಪೂರ್ಣ ಭಾರತದ ಕೊಡುಗೆಯಾಗಿದೆ ಎಂದು ಡಿಆರ್ಡಿಒ ಮುಖ್ಯಸ್ಥ ರೆಡ್ಡಿ ಮಾಹಿತಿ ನೀಡಿದರು.