ಫಾರೂಖಾಬಾದ್: ಉತ್ತರಪ್ರದೇಶದ ಕೊತವಾಲಿ ಪ್ರದೇಶದಲ್ಲಿ ಯುವಕನೊಬ್ಬ ಸುಮಾರು 13 ಮಕ್ಕಳನ್ನು ಮನೆಯಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ತಮ್ಮ ಹುಟ್ಟು ಹಬ್ಬವಿದೆ ಎಂದು ಹೇಳಿ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ಮಕ್ಕಳನ್ನು ಮನೆಯಲ್ಲಿ ಬಂಧಿಸಿ, ಮನೆಯ ಮೇಲ್ಛಾವಣಿಯಿಂದ ಗುಂಡು ಹಾರಿಸುತ್ತಿದ್ದಾನೆ.
ವರದಿಗಳ ಪ್ರಕಾರ, ಘಟನೆಯಲ್ಲಿ ಮೂವರು ಪೊಲೀಸರು ಮತ್ತು ಓರ್ವ ಗ್ರಾಮಸ್ಥ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
"ಕ್ಯಾಥರಿಯಾ ಗ್ರಾಮದಲ್ಲಿ ಇಪ್ಪತ್ತು ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ವಿ. ರಾಮ ಶಾಸ್ತ್ರಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯುವಕನ ಹುಚ್ಚಾಟ "ನಾವು ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯಬಿದ್ದರೆ, ಕಾರ್ಯಾಚರಣೆಗೆ ಎನ್ಎಸ್ಜಿ (ರಾಷ್ಟ್ರೀಯ ಭದ್ರತಾ ಸಿಬ್ಬಂದಿ) ಯನ್ನು ಸಹ ಕರೆಯಲಾಗುವುದು" ಎಂದು ಡಿಜಿಪಿ ಹೇಳಿದ್ದಾರೆ.
"ಈ ವ್ಯಕ್ತಿ ಮಕ್ಕಳನ್ನು ಹುಟ್ಟುಹಬ್ಬದ ಸಂತೋಷಕೂಟಕ್ಕೆಂದು ಕರೆದು ಮನೆಯ ನೆಲಮಾಳಿಗೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾನೆ. ಒಳಗಿನಿಂದ ಆರು ಬಾರಿ ಗುಂಡು ಹಾರಿಸಿದ್ದಾನೆ" ಎಂದು ಕಾನ್ಪುರ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.
ಆ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಿಸಿದವರ ಮೇಲೆ ಆತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 13 ಮಕ್ಕಳಲ್ಲಿ ಒಂದು ಮಗುವನ್ನು ಆತ ಬಿಟ್ಟು ಕಳುಹಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನು ನಡೆಯುತ್ತಿದೆ.