ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಒಂದು ವರ್ಷದ ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡು ಇಂದಿಗೆ ಒಂದು ವರ್ಷ ಸಂದಿದೆ. ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಇಬ್ಭಾಗ ಮಾಡಿದ ತಮ್ಮ ಐತಿಹಾಸಿಕ ನಿರ್ಧಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಆಡಳಿತಾರೂಢ ಬಿಜೆಪಿ ಯೋಜಿಸುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಗಶಃ ಎಲ್ಲಾ ಪ್ರದೇಶಗಳ ಜನ ಇನ್ನೂ ಕೂಡ ಗೊಂದಲ ಹಾಗೂ ಭಯದಲ್ಲೇ ಬದುಕುತ್ತಿದ್ದಾರೆ ಎಂದು ಅನೇಕ ತಜ್ಞರು ಹೇಳುತ್ತಾರೆ.
ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಈಟಿವಿ ಭಾರತವು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರದೇಶಗಳ ಸ್ಥಳೀಯರೊಂದಿಗೆ ಮಾತನಾಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ತೆಗೆದು ಹಾಕಿದ ವಿಚಾರವಾಗಿ ಎಲ್ಲಾ ಬೆಳವಣಿಗೆಗಳನ್ನು ನಿಕಟವಾಗಿ ಅರಿತಿರುವ ತಜ್ಞರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದೆ.
ಹೂಡಿಕೆ ಆಕರ್ಷಣೆಗೆ ತಂತ್ರ :ಕಳೆದ ವರ್ಷದ ನವೆಂಬರ್ ತಿಂಗಳ ಮೊದಲ 15 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಹೂಡಿಕೆದಾರರನ್ನು ಆಕರ್ಷಿಸಲು ಲ್ಯಾಂಡ್ ಬ್ಯಾಂಕಿಂಗ್ ರಚಿಸಲು ಪ್ರಾರಂಭಿಸಿತು. ಕೇಂದ್ರ ಸರ್ಕಾರವು 370ನೇ ವಿಧಿ ರದ್ದುಪಡಿಸಿದ ಆಗಸ್ಟ್ 5ರ ನಿರ್ಧಾರದ ಕೇವಲ ನಾಲ್ಕು ತಿಂಗಳ ಅಂತರದಲ್ಲೇ ಬಂದ ಈ ಕ್ರಮದಿಂದ, ಮತ್ತೊಂದು 'ದೊಡ್ಡ ಅಭಿವೃದ್ಧಿ' ಶೀಘ್ರದಲ್ಲೇ ಸಂಭವಿಸಬಹುದು ಎಂಬ ವದಂತಿ ಬಂದವು. ಆದರೆ, ಮುಂಬರುವ ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ-2020ರ ಹಿನ್ನೆಲೆ ಇದನ್ನು ಮಾಡಲಾಗುತ್ತದೆ ಎಂದು ಇಲ್ಲಿನ ಆಡಳಿತವು ಸ್ಪಷ್ಟಪಡಿಸಿದೆ.
ಜಮ್ಮು ಮತ್ತು ಕಾಶ್ಮೀರ ಜಾಗತಿಕ ಹೂಡಿಕೆದಾರರ ಶೃಂಗಸಭೆ -2020ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅಲ್ಲಿಗೆ ಬರುವ ಹೂಡಿಕೆದಾರರನ್ನು ಆಕರ್ಷಿಸಲು ಜಮ್ಮು ಮತ್ತು ಕಾಶ್ಮೀರ ಎರಡೂ ಪ್ರದೇಶಗಳಲ್ಲಿ 5,000 ಕಣಿವೆ ಪ್ರದೇಶದಲ್ಲಿ ಅಂದರೆ ಅಂದಾಜು 624 ಎಕರೆ ಜಾಗದಲ್ಲಿ ಲ್ಯಾಂಡ್ ಬ್ಯಾಂಕುಗಳ ರಚನೆಗಾಗಿ ನೋಡುತ್ತಿದ್ದೇವೆ. ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಬಳಸಬಹುದಾದ ಭೂಮಿಯನ್ನು ಗುರುತಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ್ ಕುಮಾರ್ ಹೇಳಿದ್ದಾರೆ.
ಈ ಶೃಂಗಸಭೆಯು ಜಮ್ಮು ಮತ್ತು ಕಾಶ್ಮೀರವನ್ನು ಕೈಗಾರಿಕಾ ಕೇಂದ್ರವಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕುಮಾರ್ ಹೇಳಿದ್ದಾರೆ. ಅಲ್ಲದೆ ಇದು ವ್ಯವಹಾರ ಸ್ನೇಹಿ ನೀತಿಗಳನ್ನು ಪ್ರಸ್ತುತಪಡಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದ ಆಂತರಿಕ ಸಾಮರ್ಥ್ಯ, ಅಭಿವೃದ್ಧಿ ಮತ್ತು ಉದ್ಯೋಗದ ಆಕಾಂಕ್ಷೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಶೃಂಗಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಸದ್ಯ ಸರ್ಕಾರದ ಮಾಹಿತಿ ಪ್ರಕಾರ ಈ ಶೃಂಗಸಭೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಯಾಕೆಂದ್ರೆ, ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸುವವರೆಗೆ ಮತ್ತು ಕೆಲ ವಿಷಯಗಳು ತಹಬದಿಗೆ ಬರುವವರೆಗೆ ಇದನ್ನು ಮುಂದೂಡಲಾಗುತ್ತದೆ. ಆದರೂ ವ್ಯವಹಾರ ಸಂಬಂಧಿ ಚಟುವಟಿಕೆಗಳನ್ನು ಬಲಪಡಿಸಲು ಈ ಅವಧಿಯನ್ನು ಬಳಸಿಕೊಳ್ಳಲು ಇಲ್ಲಿನ ಆಡಳಿತ ನಿರ್ಧರಿಸಿದೆ.
ಡೊಮಿಸಿಲ್ ಆ್ಯಕ್ಟ್(ವಸತಿ ಕಾಯ್ದೆ)..
ಈ ವರ್ಷದ ಮಾರ್ಚ್ 31ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ರಾಜ್ಯ ಕಾನೂನುಗಳ ರೂಪಾಂತರ) ಆದೇಶ, 2020ರ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ನಿವಾಸ ಹೊಂದುವ ಹೊಸ ವ್ಯಾಖ್ಯಾನವನ್ನು ಪರಿಚಯಿಸಿತು. ಈ ಹೊಸ ಕಾಯ್ದೆಯು ಎಲ್ಲಾ ಭಾರತೀಯ ನಾಗರಿಕರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಆದರೆ, ಅರ್ಜಿ ಸಲ್ಲಿಸಲು ಬಯಸುವವರು ಕೆಲ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
2019ರವರೆಗೆ ಜಮ್ಮು ಮತ್ತು ಕಾಶ್ಮೀರವು ಆರ್ಟಿಕಲ್ 370 ಮತ್ತು 35ಎ ಸಾಂವಿಧಾನಿಕ ನಿಬಂಧನೆಗಳ ಅಡಿ ವಿಶೇಷ ಸ್ಥಾನಮಾನ ಪಡೆದಿತ್ತು. ಇದರ ಪ್ರಕಾರ ಭಾರತದ ಉಳಿದ ಭಾಗಗಳ ಯಾರೊಬ್ಬರೂ, ಅಲ್ಲಿ ಖಾಯಂ ವಾಸ್ತವ್ಯ ಹಕ್ಕು ಪಡೆಯಲು ಅವಕಾಶವಿರಲಿಲ್ಲ. ಅಲ್ಲದೆ ಹೊರಗಿನವರಿಗೆ ಅಲ್ಲಿನ ಸ್ಥಳೀಯ ಉದ್ಯೋಗಕ್ಕಾಗಿ ಅಥವಾ ಅಲ್ಲಿನ ಸ್ವಂತ ಆಸ್ತಿಗೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಿರಲಿಲ್ಲ.
ಹೊಸ ನಿಯಮವು ಕೇವಲ ನಾನ್ ಗೆಜೆಟೆಡ್ ವರ್ಗದ ನಾಲ್ಕು ಉದ್ಯೋಗಗಳನ್ನು ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಿಗೆ ಕಾಯ್ದಿರಿಸಿದೆ. ಇಲ್ಲಿ ನೆಲೆಯೂರಲು ಅರ್ಜಿದಾರನಾಗಿ ಅರ್ಹತೆ ಪಡೆಯಲು ಅವರು ಪೂರೈಸಬೇಕಾದ ಕೆಲವು ಷರತ್ತುಗಳನ್ನು ಇದು ಪಟ್ಟಿ ಮಾಡುತ್ತದೆ. ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು ಅಥವಾ ರಾಜ್ಯದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ 10ನೇ ತರಗತಿ ಅಥವಾ 12ನೇ ತರಗತಿ ಪರೀಕ್ಷೆಗೆ ಹಾಜರಾಗಿರಬೇಕು.
ಕೇಂದ್ರ ಸರ್ಕಾರಿ ಅಧಿಕಾರಿಗಳ ಮಕ್ಕಳು (ಸೇನೆ, ಅರೆಸೈನಿಕ ಪಡೆಗಳು, ಐಎಎಸ್, ಐಪಿಎಸ್) ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬ್ಯಾಂಕುಗಳು, ಕೇಂದ್ರ ವಿಶ್ವವಿದ್ಯಾಲಯಗಳ ನೌಕರರು, ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವುಗಳಲ್ಲಿ ರಾಜ್ಯದ ಹೊರಗೆ ಕೆಲಸ ಮಾಡುವವರು ಕೂಡ ಸೇರುತ್ತಾರೆ.
ಪರಿಹಾರ ಮತ್ತು ಪುನರ್ವಸತಿ ಆಯುಕ್ತರಿಂದ ನೋಂದಾಯಿಸಿದ ವಲಸಿಗರು ಮೇಲೆ ತಿಳಿಸಿದ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿಲ್ಲ. ಅವರು ಸುಲಭವಾಗಿ ನಿವಾಸ ಪ್ರಮಾಣ ಪತ್ರಕ್ಕೆ ಅರ್ಹರಾಗಿರುತ್ತಾರೆ. ಸರ್ಕಾರದ ಡೊಮಿಸಿಲ್ ಆ್ಯಕ್ಟ್ ನಿರ್ಧಾರವು ಕಣಿವೆ ನಾಡಿನ ಪ್ರಮುಖ ರಾಜಕೀಯ ನಾಯಕರಿಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ ಇದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಕಾಂಗ್ರೆಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಪೀಪಲ್ಸ್ ಕಾನ್ಫರೆನ್ಸ್, ಪೀಪಲ್ಸ್ ಮೂವ್ಮೆಂಟ್ ಹಾಗೂ ಅಪ್ನಿ ಪಾರ್ಟಿ ಜಂಟಿಯಾಗಿ ಈ ಕ್ರಮದ ವಿರುದ್ಧ ಅಸಮಾಧಾನ ಹೊರಹಾಕಿವೆ.
'ಶಸ್ತ್ರಸಜ್ಜಿತ ಪಡೆಗಳಿಗೆ ಸ್ಟ್ರಾಟೆಜಿಕ್ ಪ್ರದೇಶಗಳು':ಈ ವರ್ಷದ ಜುಲೈ 17 ರಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶದೊಳಗಿನ ಕೆಲ ಸ್ಥಳಗಳನ್ನು ಸಶಸ್ತ್ರ ಪಡೆಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ 'ಕಾರ್ಯತಂತ್ರದ ಪ್ರದೇಶಗಳು' ಎಂದು ಘೋಷಿಸಿತು.