ವೈರಾಣು ರೋಗಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪ್ರತಿ ವರ್ಷ ಹವಾಮಾನ ಬದಲಾದಾಗ ಈ ರೀತಿಯ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ವರ್ಷದುದ್ದಕ್ಕೂ ಭೀತಿ ಹುಟ್ಟಿಸುವ ಹೊಸ ರೋಗ ಎಂದರೆ ಡೆಂಘಿ. ಇತ್ತೀಚಿನವರೆಗೆ ಅಂದಾಜು 3.3 ಕೋಟಿ ಜನರು ಇದರಿಂದ ಬಾಧಿತರಾಗಿದ್ದಾರೆ. ಇನ್ನು, ಯಾವುದೇ ಲಕ್ಷಣ ಕಾಣಿಸದಿದ್ದರೂ ಅಂದಾಜು 10 ಕೋಟಿಗೂ ಹೆಚ್ಚು ಜನ ರೋಗದಿಂದ ಬಳಲಿದ್ದಾರೆ. ಒಂದು ಕಾಲದಲ್ಲಿ, ಡೆಂಘಿ ಕೇವಲ ನಗರ ಪ್ರದೇಶದ ಮಕ್ಕಳನ್ನು ಮಾತ್ರ ಕಾಡುತ್ತಿತ್ತು. ಈಗ, ವಯಸ್ಸಿನ ಮಿತಿ ಇಲ್ಲದೇ, ಎಲ್ಲಾ ಪ್ರದೇಶದ ಜನರಿಗೂ ಸಮಸ್ಯೆ ಉಂಟು ಮಾಡುತ್ತಿದೆ. ಈ ಮುಂಚೆ, ಸಮಸ್ಯೆ ಉಲ್ಬಣಗೊಂಡಾಗ, ಪ್ಲೆಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ, ರಕ್ತ ಮಂದವಾಗುವುದು, ರಕ್ತಸ್ರಾವ ಕಾಣಿಸಿಕೊಳ್ಳುತ್ತಿತ್ತು. ಈಗ, ಈ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಮೆದುಳು, ಹೃದಯ ಮತ್ತು ಪಿತ್ತಜನಕಾಂಗಗಳಿಗೆ ತೀವ್ರ (ವಿಲಕ್ಷಣ) ಸಮಸ್ಯೆ ತರುತ್ತಿದೆ. ಹೀಗಾಗಿ ಜನ ಗಾಬರಿಗೆ ಒಳಗಾಗುತ್ತಿದ್ದಾರೆ. ಈ ರೋಗ ಕಣ್ಣುಗಳು ಮತ್ತು ಸಂದುಗಳ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಹಾಗೆ ನೋಡಿದರೆ, ಶೇ 98ರಷ್ಟು ಡೆಂಘೀ ಕೇವಲ ಜ್ವರವಾಗಿ ಬಂದು ಹೋಗುತ್ತದೆ. ಕೆಲವೊಮ್ಮೆ, ಜನರಿಗೆ ಅದರ ತೀವ್ರತೆಯ ಅರಿವೂ ಆಗಿರುವುದಿಲ್ಲ. ಕೇವಲ ಶೇಕಡಾ ಒಂದರಷ್ಟು ರೋಗಿಗಳಿಗೆ ಮಾತ್ರ ಅದರ ತೀವ್ರತೆ ಉಂಟಾಗುತ್ತದೆ. ಪ್ರಸ್ತುತ ಸಾವಿನ ಪ್ರಮಾಣದಲ್ಲಿ ಈ ವಲಯವೇ ಹೆಚ್ಚು ಸಮಸ್ಯಾತ್ಮಕವಾಗಿರುವುದು. ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಬಹುತೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ ಬಳಸುವುದರ ಮೂಲಕ ಸೋಂಕು ತಗಲದಂತೆ ನೋಡಿಕೊಳ್ಳಬಹುದು. ಡೆಂಘಿ ಕುರಿತು ತಿಳಿವಳಿಕೆ ಹಾಗೂ ಎಚ್ಚರಿಕೆ ರೂಢಿಸಿಕೊಳ್ಳುವುದೇ ಸದ್ಯದ ಅವಶ್ಯಕತೆ.
ಡೆಂಘೀ ಮೂಲ ಎಲ್ಲಿಯದು?
ಫ್ಲಾವಿ ವೈರಸ್ ಎಂಬುದು ಡೆಂಘಿ ರೋಗದ ಮೂಲ ಕಾರಣ. ಇದರಲ್ಲಿ ನಾಲ್ಕು ವಿಧಗಳಿವೆ. ಡೆಂಘಿ 1, ಡೆಂಘಿ 2, ಡೆಂಘಿ 3 ಮತ್ತು ಡೆಂಘಿ 4. ಇವೆಲ್ಲ ಹರಡುವುದು ಏಡೀಸ್ ಈಜಿಪ್ತಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ. ಮೇಲ್ಕಾಣಿಸಿದ ನಾಲ್ಕು ವಿಧದ ಡೆಂಘಿ ಪೈಕಿ ಯಾವುದಾದರೂ ಒಂದರಿಂದ ಜ್ವರ ಬಂದರೂ, ವ್ಯಕ್ತಿಗೆ ಅದೇ ವಿಧದ ಜ್ವರ ಮತ್ತೆ ಬರುವುದಿಲ್ಲ. ಆದರೆ, ಬೇರೆ ರೀತಿಯ ಸೊಳ್ಳೆಗಳ ಕಡಿತದಿಂದ ಜ್ವರ ಬರಬಹುದು. ಅಂದರೆ, ವ್ಯಕ್ತಿಯೊಬ್ಬನಿಗೆ ಅವನ ಜೀವಿತಾವಧಿಯಲ್ಲಿ ಕೇವಲ ನಾಲ್ಕು ಸಲ ಮಾತ್ರ ಡೆಂಘಿ ಬರಬಹುದು ಎಂಬುದು ಇದರರ್ಥ. ಒಂದು ವೇಳೆ ಬೇರೆ ವಿಧದ ವೈರಸ್‌ನಿಂದ ಆತನಿಗೆ ಜ್ವರ ಬಂದರೆ, ಅದು ಗಂಭೀರವಾಗುವ ಸಾಧ್ಯತೆಗಳಿವೆ.
ಸೊಳ್ಳೆ ಕಡಿತಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಡೆಂಘಿ ಬರುತ್ತದೆಯೇ?
ಇಲ್ಲ. ಕಚ್ಚಿದ ಸೊಳ್ಳೆಯು ಡೆಂಘಿ ತರುವ ವೈರಸ್ ಹೊಂದಿದ್ದರೆ ಮಾತ್ರ ಸಮಸ್ಯೆ. ಒಂದು ವೇಳೆ ವೈರಸ್ ಇದ್ದರೂ ಸಹ, ಜ್ವರ ಬರುವ ಸಾಧ್ಯತೆಗಳು ಇಲ್ಲ. ಏಕೆಂದರೆ, ಅಂತಹ ವ್ಯಕ್ತಿಗೆ ಹಿಂದೆ ಯಾವಾಗಾದರೂ ಡೆಂಘಿ ಬಂದಿರಬಹುದು. ವೈರಸ್ ವಿರುದ್ಧ ಹೋರಾಡುವಂತಹ ಪ್ರತಿರೋಧಕಗಳು ಆತನ ದೇಹದಲ್ಲಿ ಇದ್ದಿರಬಹುದು. ಡೆಂಘಿ ವೈರಸ್ ದೇಹವನ್ನು ಪ್ರವೇಶಿಸಿದರೂ, ಜ್ವರದ ಲಕ್ಷಣಗಳು ಎಲ್ಲರಲ್ಲಿಯೂ ಕಾಣುವುದಿಲ್ಲ. ಕೇವಲ ಶೇ10 ರಷ್ಟು ಜನರಲ್ಲಿ ಮಾತ್ರ ರೋಗದ ಲಕ್ಷಣಗಳು ಕಾಣಿಸುತ್ತವೆ. ಉಳಿದವರಲ್ಲಿ ರೋಗದ ಕೇವಲ ಒಂದು ಅಥವಾ ಎರಡು ಲಕ್ಷಣಗಳು ಮಾತ್ರ ಕಾಣಿಸಬಹುದು. ಕೆಲವರು ತೀವ್ರ ತಲೆನೋವು ಮತ್ತು ಮೈ, ಕೈ ನೋವಿನಿಂದ ಬಳಲಬಹುದು.
ಆಸ್ಪತ್ರೆಗೆ ಯಾವಾಗ ದಾಖಲಾಗಬೇಕು?
ಹೊಟ್ಟೆ ನೋವು, ಸತತವಾಗಿ ವಾಂತಿಯಾಗುವುದು, ಹೊಟ್ಟೆ ಮತ್ತು ಎದೆಯಲ್ಲಿ ನೀರು ತುಂಬಿಕೊಳ್ಳುವುದು, ಸುಸ್ತು, ಪಿತ್ತಜನಕಾಂಗದ ಹಿಗ್ಗುವಿಕೆ ಕಾಣಿಸಿಕೊಂಡರೆ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಒಂದು ವೇಳೆ ರಕ್ತದೊತ್ತಡದಲ್ಲಿ ಕುಸಿತವಾದರೆ, ಅನಿಯಂತ್ರಿತ ರಕ್ತಸ್ರಾವ ಪ್ರಾರಂಭವಾದರೆ, ಯಾವುದಾದರೂ ಅಂಗ ವೈಫಲ್ಯದ ಸೂಚನೆಗಳು ಕಂಡುಬಂದರೆ (ಎದೆ ನೋವು, ಉಸಿರಾಟದ ಸಮಸ್ಯೆ, ಮೂರ್ಛೆ ರೋಗ ಇತ್ಯಾದಿ) ಕಂಡುಬಂದರೆ ತಡ ಮಾಡದೇ ಆಸ್ಪತ್ರೆಗೆ ದಾಖಲಿಸಬೇಕು. ಮಧುಮೇಹ, ಅತಿಯಾದ ರಕ್ತದೊತ್ತಡ, ಹೊಟ್ಟೆ ಹುಣ್ಣು, ರಕ್ತ ಹೀನತೆ, ಗರ್ಭಿಣಿಯರು, ಸ್ಥೂಲಕಾಯದವರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವೃದ್ಧರನ್ನು ಡೆಂಘಿ ತೀವ್ರವಾಗಿ ಬಾಧಿಸಬಹುದು. ಆದ್ದರಿಂದ, ರೋಗಲಕ್ಷಣಗಳು ಸ್ಪಷ್ಟವಾಗಿರದಿದ್ದರೂ, ಅಂತಹ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು.
ಸಂದರ್ಭಕ್ಕೆ ತಕ್ಕಂತೆ ಚಿಕಿತ್ಸೆ :
ಸಾಧಾರಣ ಜ್ವರಕ್ಕೆ ಪ್ಯಾರಾಸಿಟಮಲ್ ಸಾಕಾಗುತ್ತದೆ. ವಾಂತಿ ಇಲ್ಲದಿದ್ದರೆ, ಓಆರ್‌ಎಸ್ ದ್ರವವನ್ನು ಕೊಡಬೇಕು. ವಾಂತಿ ಕಡಿಮೆಯಾಗುತ್ತಿದ್ದರೂ, ಓಆರ್‌ಎಸ್ ದ್ರವ ನೀಡುವುದನ್ನು ಮುಂದುವರಿಸಬೇಕು. ಮುಖ್ಯವಾಗಿ, ಮಕ್ಕಳನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಪ್ಲೆಟ್‌ಲೆಟ್ ಕೋಶಗಳ ಸಂಖ್ಯೆಯಲ್ಲಿ ಕುಸಿತ, ರಕ್ತದ ಸಾಂದ್ರತೆ ಮಂದವಾಗುವ ಲಕ್ಷಣಗಳು ಕಾಣಿಸಿಕೊಂಡರೆ, ಒಟ್ಟು ರಕ್ತದಲ್ಲಿ ಕೆಂಪು ರಕ್ತಕಣಗಳ ಲಭ್ಯತೆ / ರಕ್ತದ ಒಟ್ಟು ಕೋಶ ಮೊತ್ತದ ಪರೀಕ್ಷೆ ಮಾಡಿಸಬೇಕು. ಪ್ಲೆಟ್‌ಲೆಟ್‌ಗಳ ಸಂಖ್ಯೆ ತಿಳಿಯಲು ರಕ್ತ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಬೇಕು. ಬಾಯಿಂದ ಆಹಾರ ಸೇವನೆ ಸಾಧ್ಯವಾಗದಿದ್ದಾಗ ಅಥವಾ ಹೆಮೊಗ್ಲೊಬಿನ್ ಪ್ರಮಾಣ ಹೆಚ್ಚಳವಾದಾಗ ಅಥವಾ ರಕ್ತದೊತ್ತಡದಲ್ಲಿ ಕುಸಿತವಾದಾಗ, ಸಲೈನ್ (ಲವಣಯುಕ್ತ ದ್ರಾವಣ) ಹಾಕಿಸಬೇಕು. ಶ್ವಾಸಕೋಶದಲ್ಲಿ ದ್ರವ ಸೋರಿಕೆಯಾಗಿ ಉಸಿರಾಟದ ತೊಂದರೆಗೆ ಒಳಗಾಗಿದ್ದರೆ, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಸಬೇಕು. ಶ್ವಾಸಕೋಶ ಮತ್ತು ಹೊಟ್ಟೆಯೊಳಗಿನ ದ್ರವವನ್ನು ಹೊರಹಾಕುವ ಯಾವ ಪ್ರಯತ್ನವನ್ನೂ ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ, ರಕ್ತಸ್ರಾವ ಉಂಟಾಗುವ ಅಪಾಯವಿರುತ್ತದೆ. ಒಂದು ವೇಳೆ ಪಿತ್ತಜನಕಾಂಗ ಮತ್ತು ಹೃದಯ ಘಾಸಿಗೊಂಡಿದ್ದರೆ, ಸೂಕ್ತ ಚಿಕಿತ್ಸೆಯನ್ನು ತಕ್ಷಣ ನೀಡಬೇಕು.
ರಕ್ತ ಮಂದವಾಗುವುದು ತೀವ್ರ ಸಮಸ್ಯೆ :
ಡೆಂಘೀ ಜ್ವರದಲ್ಲಿ, ಪ್ಲೆಟ್‌ಲೆಟ್‌ಗಳ ಸಂಖ್ಯೆಯ ಕುಸಿತಕ್ಕಿಂತ, ರಕ್ತ ಮಂದವಾಗುವುದು ಹೆಚ್ಚು ಅಪಾಯಕಾರಿ ಲಕ್ಷಣ. ರಕ್ತನಾಳಗಳಿಂದ ಪ್ಲಾಸ್ಮಾ ದ್ರವ ಸೋರಿಕೆಯಾಗುವುದೇ ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ರಕ್ತನಾಳಗಳ ಗೋಡೆಗಳಲ್ಲಿ, ಜೀವಕೋಶಗಳು ಒಂದಕ್ಕೊಂದು ಒತ್ತಾಗಿ ಅಂಟಿಕೊಂಡಿರುತ್ತವೆ. ಡೆಂಘಿ ಆಕ್ರಮಣವಾದಾಗ, ಜೀವಕೋಶಗಳೊಂದಿಗೆ ಪರಸ್ಪರ ಸಂವಹನ ಸಾಧ್ಯವಾಗಿಸುವ ರಸಾಯನಿಕಗಳು ಸ್ರವಿಸಲ್ಪಡುತ್ತವೆ. ರಕ್ತಕಣಗಳ ಒಳಗೋಡೆಗಳಲ್ಲಿರುವ ಜೀವಕೋಶಗಳನ್ನು ಇವು ಸ್ಥಳಾಂತರಗೊಳಿಸುವುದರಿಂದ ಅಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವುಗಳ ಮೂಲಕ ದ್ರವ ಸೋರಿಕೆಯಾಗುವುದು. ಹೆಮೊಗ್ಲೊಬಿನ್, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳಂತಹ ಘನ ಪದಾರ್ಥಗಳ ಪ್ರಮಾಣ ಹೆಚ್ಚುವುದರಿಂದ ರಕ್ತದ ಸಾಂದ್ರತೆ ಹೆಚ್ಚುತ್ತದೆ. ಹೀಗೆ ರಕ್ತ ಗಟ್ಟಿಯಾದಾಗ, ರಕ್ತದೊತ್ತಡ ಕುಸಿಯುತ್ತದೆ. ಪರಿಣಾಮವಾಗಿ, ಇತರೆಲ್ಲ ಅಂಗಗಳು ಘಾಸಿಗೊಳ್ಳುತ್ತವೆ ಹಾಗೂ ರೋಗಿ ಆಘಾತಕ್ಕೆ ಈಡಾಗುತ್ತಾನೆ. ಪ್ರಸ್ತುತ ಬಹುತೇಕ ಡೆಂಗೀ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತಿರುವುದು ಹೀಗೆ.
ಆಸ್ಪತ್ರೆಯಿಂದ ಬಿಡುಗಡೆಯಾಗುವುದು ಯಾವಾಗ?
- ಪ್ಯಾರಾಸಿಟಮಲ್ ಮಾತ್ರೆಗಳನ್ನು ನೀಡದಿರುವಾಗಲೂ ಸತತ ಎರಡು ದಿನಗಳ ಕಾಲ ಯಾವುದೇ ಜ್ವರ ಇಲ್ಲದಿದ್ದಾಗ.
- ಬಾಯಿರುಚಿ ಮತ್ತೆ ವಾಪಾಸಾದಾಗ.
- ನಾಡಿ ಗತಿ, ಉಸಿರಾಟ ಗತಿ, ಮತ್ತು ರಕ್ತದೊತ್ತಡ ಸಹಜಸ್ಥಿತಿಗೆ ಮರಳಿದಾಗ.
- ಮೂತ್ರವಿಸರ್ಜನೆ ಸರಾಗವಾದಾಗ.
- ಸಹಜ ಸ್ಥಿತಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿರಬೇಕಾದ ಪ್ಲೆಟ್‌ಲೆಟ್‌ಗಳ ಸಂಖ್ಯೆ ಕನಿಷ್ಠ 50,000 ಕ್ಕಿಂತ ಹೆಚ್ಚಾದಾಗ.
- ಸಲೈನ್ ನೀಡದಿದ್ದಾಗೂ ಹೆಮಟೊಕ್ರಿಟ್ ಮಟ್ಟ ಸಾಮಾನ್ಯ ಸ್ಥಿತಿಯಲ್ಲಿ ಇದ್ದಾಗ.
ಗುಣಮುಖ ಹಂತ ಯಾವಾಗ?