ಭುವನೇಶ್ವರ್:ದೇಶದೆಲ್ಲೆಡೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಗೊತ್ತಿರುವ ಸಂಗತಿ. ಪರಿಸರಕ್ಕೆ ಮಾರಕವಾಗಿರುವ ಈ ಮಹಾಮಾರಿಯನ್ನು ಹೊಡೆದೋಡಿಸಲು ಸರ್ಕಾರಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದ್ರೂ ಸಹ ಇದರ ಬಳಕೆ ಮಾತ್ರ ಕಡಿಮೆಯಾಗ್ತಿಲ್ಲ. ಹೀಗಿರುವಾಗ ಒಡಿಶಾದ ಭುವನೇಶ್ವರ್‌ನಲ್ಲಿ ದಂಪತಿ ಸುಮಾರು ವರ್ಷಗಳ ಹಿಂದಿನಿಂದಲೂ ಅನುಪಯುಕ್ತ ಪ್ಲಾಸ್ಟಿಕ್ ಬಳಸಿ ಮನೆಯ ಸೌಂದರ್ಯ ಹೆಚ್ಚಿಸುತ್ತಿದ್ದಾರೆ.
ನಾನು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಮನೆಯ ಡೆಕೋರ್ ಸಾಮಾನುಗಳನ್ನು ತಯಾರಿಸುತ್ತೇನೆ. ಬಳಿಕ ಇವುಗಳನ್ನು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಈ ಒಂದು ಕಾರ್ಯಕ್ಕೆ ಅವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗಳಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ಮರುಬಳಕೆ ಮಾಡಬಹುದೆಂದು ಜನರಿಗೆ ಶಿಕ್ಷಣ ನೀಡಲು ಬಯಸುತ್ತೇನೆ ಅಂತಾ ಕಲಾವಿದೆ ಶೈಲಾಬಾಬಾ ದಾಸ್ ಹೇಳ್ತಾರೆ.
ಪರಿಸರದ ಮಹಾಶತ್ರುವನ್ನು ಉಪಯುಕ್ತವಾಗಿ ಬಳಸಿದ ಕಲಾವಿದೆ 1990ರಲ್ಲೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲು ಈ ದಂಪತಿ ನಿರ್ಧಾರ ಮಾಡಿದ್ದರು. 69 ವರ್ಷದ ಶೈಲಾಬಾಬಾ ಮತ್ತು ಆಕೆಯ ಗಂಡ ಅನೇಕ ಯುವಕರಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಬಗೆ ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇನ್ನು ಇವರಿಗೆ ಈ ಆಲೋಚನೆ ಹುಟ್ಟಿದ್ದೇ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಹಲವು ವರ್ಷಗಳಿಂದ ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆಕೆ ವೈದ್ಯರ ನಿರ್ದೇಶನದಂತೆ ಔಷಧಿಗಳನ್ನು ಸೇವಿಸುತ್ತಿದ್ದರು. ಆಗ ಮನೆಯಲ್ಲಿ ಬರೀ ಪ್ಲಾಸ್ಟಿಕ್ಗಳು ಕಾಣುತ್ತಿದ್ದವು. ಇದರಿಂದ ನನ್ನ ಪತ್ನಿ ಅವುಗಳನ್ನು ಮರುಬಳಕೆ ಮಾಡಿ ಮನೆಯ ಸೌಂದರ್ಯ ಹೆಚ್ಚಿಸುತ್ತಿದ್ದರು. ‘ತ್ಯಜಿಸುವ ಬದಲು ಮರುಬಳಸು’ ಎಂಬುದು ಆಕೆಯ ಮಂತ್ರವಾಗಿತ್ತು. ಸರ್ಕಾರ ಏನಾದ್ರೂ ಸಹಾಯ ಮಾಡಿದಲ್ಲಿ ಆಕೆ ತನ್ನ ಪ್ರತಿಭೆ ಪ್ರದರ್ಶಿಸುತ್ತಾಳೆ ಅಂತಾ ಕಲಾವಿದೆ ಶೈಲಾಬಾಬಾಳ ಗಂಡ ಲಕ್ಷ್ಮೀನಾರಾಯಣ ದಾಸ್ ಹೇಳ್ತಾರೆ.
ಇನ್ನು ‘ತ್ಯಜಿಸುವ ಬದಲು ಮರುಬಳಸು’ ಎಂಬುದು ಶೈಲಾಬಾಬಾ ಅವರ ಧ್ಯೇಯವಾಕ್ಯವಾಗಿದೆ. ಪ್ರತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಸುವುದು ಇವರ ಕಲೆಯಾಗಿದ್ದು, ಇವರ ಮನೆಯಲ್ಲಿ ಪ್ಲಾಸ್ಟಿಕ್‌ನಿಂದ ಅರಳಿದ ಹೂವುಗಳನ್ನು ನಾವು ಕಾಣಬಹುದಾಗಿದೆ.
ನಮ್ಮ ಅಕ್ಕಳ ಕೆಲಸ ನೋಡಿದ್ರೆ ಅವಳಿಗೆ 69 ವರ್ಷ ವಯಸ್ಸಾಗಿದೆ ಎಂಬುದು ಕಾಣುವುದಿಲ್ಲ. ನಾನು ಸುಮಾರು 20 ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊಡುತ್ತಲೇ ಬಂದಿದ್ದೇನೆ. ಅವರು ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಸಿ ಮನೆಯ ಸುಂದರತೆಯನ್ನು ಹೆಚ್ಚಿಸುತ್ತಾರೆ. ಇದರಿಂದ ನಾನು ಆಶ್ಚರ್ಯಚಕಿತಳಾಗಿದ್ದೇನೆ ಅಂತಾ ಅಕ್ಕನ ಸಾಧನೆ ಬಗ್ಗೆ ನಿರ್ಮಾಲಾ ಮೊಹಂತಿ ಹೇಳ್ತಾರೆ.
ಶೈಲಾಬಾಬಾ ಪ್ಲಾಸ್ಟಿಕ್ ತ್ಯಾಜ್ಯದಿಂದ ನವಿಲು, ಗಿಡಗಳು, ಹೂವು, ಎಲೆಗಳನ್ನು ಆಕರ್ಷಕವಾಗಿ ತಯಾರು ಮಾಡುತ್ತಾರೆ. ಶೈಲಾಬಾಬಾ ಅವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ರೀತಿಯೂ ಬಳಸಬಹುದೆಂದು ತಿಳಿಸಿಕೊಟ್ಟಿದ್ದಾರೆ. ಇಂದಿನಿಂದಲೇ ನೀವೂ ಸಹ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಸಿ ನಿಮ್ಮ ಮನೆಯ ಸುಂದರತೆಯನ್ನು ಹೆಚ್ಚಿಸಿ.