ನವದೆಹಲಿ: ವಿವಿಧ ರಾಜ್ಯಗಳ ಪೊಲೀಸರು ಮತ್ತು ಅರೆಸೇನಾ ಪಡೆಗಳ ಒಟ್ಟು 926 ಅಧಿಕಾರಿಗಳಿಗೆ, ನಾಳೆ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಷ್ಠಿತ ಪೊಲೀಸ್ ಪದಕವನ್ನು ನೀಡಲಾಗುತ್ತದೆ.
ದಿವಂಗತ ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಹೆಸರು ಪಟ್ಟಿಯಲ್ಲಿದ್ದು, ಶರ್ಮಾ ಅವರು 2008 ರ ಬಾಟ್ಲಾ ಹೌಸ್ ಎನ್ಕೌಂಟರ್ ಸಮಯದಲ್ಲಿ ಮೃತಪಟ್ಟಿದ್ದರು. ಹಾಗಾಗಿ ಅವರು ಮರಣೋತ್ತರ ಶೌರ್ಯ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಗೃಹ ಸಚಿವಾಲಯ ಹೊರಡಿಸಿರುವ ಪಟ್ಟಿಯ ಪ್ರಕಾರ, ದಿವಂಗತ ಕಾನ್‌ಸ್ಟೇಬಲ್ ಏಕನಾಥ ಯಾದವ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಾಹ್ನಿ ಆಯ್ಕೆಯಾಗಿದ್ದು, ಇಬ್ಬರು ಉತ್ತರ ಪ್ರದೇಶದವರಾಗಿದ್ದಾರೆ. ಇವರು ಮರಣೋತ್ತರ ಶೌರ್ಯ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಅಲ್ಲದೇ ಸಿಆರ್‌ಪಿಎಫ್ ಕಾನ್ಸ್ಟೇಬಲ್ಗಳಾದ ಪ್ರಂಜಲ್ ಪಚಾನಿ, ಲಾಜು ಎನ್ಎಸ್, ಫಟ್ಟೆ ಸಿಂಗ್ ಕುಡೋಪಾ ಮತ್ತು ಲಕ್ಷ್ಮಣ್ ಪರ್ಟಿ, ಗಡಿ ಭದ್ರತಾ ಪಡೆಯ ಸಹಾಯಕ ಕಮಾಂಡೆಂಟ್ ವಿನಯ್ ಪ್ರಸಾದ್ ಅವರನ್ನು ಮರಣೋತ್ತರ ಶೌರ್ಯ ಪೊಲೀಸ್ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಗೆ ರಾಜ್ಯ ಪೊಲೀಸರು, ಅರೆಸೈನಿಕರು ಸೇರಿದಂತೆ ವಿವಿಧ ಪಡೆಗಳ ಒಟ್ಟು 215 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ವಿಶೇಷ ಸೇವೆ ನೀಡಿದ 80 ಸಿಬ್ಬಂದಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ, ಮೆರಿಟೋರಿಯಸ್ ಸೇವೆಗಾಗಿ 631 ಸಿಬ್ಬಂದಿ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಒಟ್ಟು 946 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕವನ್ನು ನೀಡಲಾಗಿತ್ತು.
ಈ ವರ್ಷ ಶೌರ್ಯಕ್ಕಾಗಿ ಪೊಲೀಸ್ ಪದಕಕ್ಕೆ ಆಯ್ಕೆಯಾದ 215 ಸಿಬ್ಬಂದಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು 81, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 55, ಉತ್ತರ ಪ್ರದೇಶದ ಪೊಲೀಸರು 23, ದೆಹಲಿ ಪೊಲೀಸರು 16, ಮಹಾರಾಷ್ಟ್ರ ಪೊಲೀಸರು 14, ಜಾರ್ಖಂಡ್ ಪೊಲೀಸರು 12 ಮಂದಿ ಸೇರಿದ್ದಾರೆ. ಅಸ್ಸಾಂ ಪೊಲೀಸರಿಂದ ಐದು, ಅರುಣಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ಪೊಲೀಸರಿಂದ ತಲಾ ಮೂರು, ತೆಲಂಗಾಣ ಪೊಲೀಸರಿಂದ ಇಬ್ಬರು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯಿಂದ ಒಬ್ಬರು ಇದ್ದಾರೆ.