ನವದೆಹಲಿ:ವಿಶ್ವದಾದ್ಯಂತ ಕೊರೊನಾ ರಣಕೇಕೆ ಹಾಕುತ್ತಿದ್ದು, ಭಾರತದಲ್ಲೂ ದಿನದಿಂದ ದಿನಕ್ಕೆ ತನ್ನ ರುದ್ರನರ್ತನ ತೋರಲು ಶುರು ಮಾಡಿರುವ ಈ ಮಹಾಮಾರಿ ಹೆಚ್ಚು ಹೆಚ್ಚು ಜನರಲ್ಲಿ ಹರಡಲು ಶುರುವಾಗಿದೆ.
ನಿನ್ನೆಯವರೆಗೆ 606 ಜನರಲ್ಲಿ ಕಾಣಿಸಿಕೊಂಡಿದ್ದ ಈ ಡೆಡ್ಲಿ ವೈರಸ್ ಇದು ಒಂದೇ ದಿನ ಬರೋಬ್ಬರಿ 88 ಜನರಲ್ಲಿ ಕಾಣಿಸಿಕೊಂಡಿದ್ದು, ಇದರ ಒಟ್ಟು ಸಂಖ್ಯೆ ಇದೀಗ 694 ಆಗಿದೆ. ಒಂದೇ ದಿನ ಅತಿ ಹೆಚ್ಚು ಅಂದರೆ 88 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ದೇಶದ ಜನರಲ್ಲಿ ಹೆಚ್ಚು ಆತಂಕ ಮೂಡಿಸಿದೆ.
ದೇಶದಲ್ಲಿ ಕಂಡು ಬಂದ ಕೊರೊನಾ ಪ್ರಕರಣ ಭಾರತೀಯರಲ್ಲಿ 647 ಹಾಗೂ 47 ವಿದೇಶಿಗರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, 45 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 16 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 121, ಕೇರಳದಲ್ಲಿ 110, ಕರ್ನಾಟಕದಲ್ಲಿ 55 ಅತಿ ಹೆಚ್ಚು ಕೇಸ್ ಕಂಡು ಬಂದಿದ್ದು, ಉಳಿದಂತೆ ಉತ್ತರಪ್ರದೇಶದಲ್ಲಿ 40, ಗುಜರಾತ್ನಲ್ಲಿ 42, ನವದೆಹಲಿಯಲ್ಲಿ 35, ತೆಲಂಗಾಣದಲ್ಲಿ 34, ರಾಜಸ್ಥಾನ 39, ಪಂಜಾಬ್ 33 ಕೇಸ್ಗಳು ಕಂಡು ಬಂದಿವೆ. ಉಳಿದ ರಾಜ್ಯಗಳಲ್ಲಿ ಕೂಡ ಕೊರೊನಾ ವೈರಸ್ ಲಗ್ಗೆ ಹಾಕಿದ್ದು, ತನ್ನ ಕಬಂಧ ಬಾಹು ವಿಸ್ತಾರ ಮಾಡಿಕೊಳ್ಳುತ್ತಿದೆ.
ಇದರಿಂದ ಹೊರಬರಲು ದೇಶವನ್ನೇ ಲಾಕ್ಡೌನ್ ಮಾಡಿ ಆದೇಶ ಹೊರಹಾಕಲಾಗಿದ್ದರೂ, ನಿಯಂತ್ರಣ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿರುವುದು ಮತ್ತಷ್ಟು ಆತಂಕ ಮೂಡಿಸಿದೆ.