ನವದೆಹಲಿ: ಭಾರತದಲ್ಲಿ ದೃಢವಾದ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು 21- 40 ವಯಸ್ಸಿನವರಲ್ಲಿ ಕಂಡುಬಂದಿವೆ ಎಂಬುದು ಕೇಂದ್ರ ಆರೋಗ್ಯ ಇಲಾಖೆ ಅಂಕಿ - ಅಂಶಗಳಿಂದ ದೃಢಪಟ್ಟಿದೆ.
ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯವು, ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ವಯಸ್ಸಿನ ಆಧಾರದ ಮೇಲಿನ ವಿಶ್ಲೇಷಣೆಯ ಪ್ರಕಾರ ಅವರಲ್ಲಿ ಶೇ. 42ರಷ್ಟು ಜನ 21 ರಿಂದ 40 ವರ್ಷ ವಯಸ್ಸಿನವರು. ನಂತರದ ಅತಿ ಹೆಚ್ಚು ಸೋಂಕಿತರು 41 ರಿಂದ 50 ವರ್ಷದೊಳಗಿನವರು. ಇದು ದೇಶದ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಶೇ. 33 ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
60 ವರ್ಷ ದಾಟಿದ ಹಿರಿಯ ನಾಗರಿಕರು ಈ ಸೋಂಕಿಗೆ ಹೆಚ್ಚು ಅಪಾಯಕಾರಿಯಾದ ಗುಂಪು. ದೇಶದ ಕೋವಿಡ್ -19 ರೋಗಿಗಳಲ್ಲಿ ಹಿರಿಯ ನಾಗರಿಕರ ಪ್ರಮಾಣ ಶೇ.17 ರಷ್ಟಿದೆ. ಇನ್ನು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕೇವಲ 9 ಶೇ.ದಷ್ಟು ಜನರಿಗೆ ಮಾತ್ರ ಸೋಂಕು ಬಾಧಿಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಅಂಕಿ - ಅಂಶಗಳಿಂದ ತಿಳಿದು ಬರುವ ಶಾಕಿಂಗ್ ಅಂಶವೆಂದರೆ ಭಾರತದಲ್ಲಿ ಹೆಚ್ಚಾಗಿ ದುಡಿಯುವ ವಯಸ್ಸಿನ ಜನರಿಗೆ ಸೋಂಕು ತಗುಲಿರುವುದು. ಯುವಕರಿಗೆ ಹೆಚ್ಚು ಸೋಂಕು ತಗುಲಿರುವುದು ಈ ಅಂಕಿ - ಅಂಶಗಳಿಂದ ಸ್ಪಷ್ಟವಾಗಿದೆ. ಶೇ. 83 ರಷ್ಟು ರೋಗಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದರಿಂದ ಯುವ ಭಾರತೀಯರು ಈ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿದೆ. ಆದರೆ ಒಂದು ನಿರಾಳವಾಗುವ ಅಂಶವೆಂದರೆ, ಕೊರೊನಾದಿಂದ ಸಾವನ್ನಪ್ಪಿದವರಲ್ಲಿ ಬಹುತೇಕರು ಹಿರಿಯ ನಾಗರಿಕರು.