ನವದೆಹಲಿ: ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆ ನಿಯಂತ್ರಿಸುವ ಸಲುವಾಗಿ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ಬೆಲೆ ಏರಿಕೆ ಸರಿದೂಗಿಸುವ ಸಂಬಂಧ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ದೇಶದಲ್ಲಿನ ಪೂರೈಕೆ ಪ್ರಮಾಣವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮತ್ತು ಗ್ರಾಹಕರ ಕೈಗೆಟುದ ಮಟ್ಟಕ್ಕೆ ತಲುಪಿದ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿ ಆಮದು ಮಾಡಿಕೊಂಡಿದ್ದಾರೆ. ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.
ಕೋಆಪರೇಟಿವ್ ನಾಫೆಡ್ ಸಹ ಈರುಳ್ಳಿ ಆಮದು ಮಾಡಿಕೊಳ್ಳಲು ಪ್ರಾರಂಭಿಸಲಿದೆ ಎಂದ ಗೋಯಲ್, ಪ್ರಮುಖ ಸರಕುಗಳ ಸ್ಥಳೀಯ ಪೂರೈಕೆ ಮತ್ತು ಬೆಲೆ ನಿಯಂತ್ರಣಕ್ಕಾಗಿ ಭೂತಾನ್ ದೇಶದಿಂದ 30,000 ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಚಿಲ್ಲರೆ ಈರುಳ್ಳಿ ಬೆಲೆಯೂ ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ. ಸ್ಥಿರವಾಗಿದೆ. ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತುಗಳನ್ನು ಸಹ ಸಮಯೋಚಿತವಾಗಿ ನಿಷೇಧಿಸಲಾಗಿದ್ದು, ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಡಿಸೆಂಬರ್ ವರೆಗೆ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವು ನಿಯಮ ಸಡಿಲಿಕೆ ಮಾಡಿದೆ. ಈವರೆಗೆ 7,000 ಟನ್ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಂಡಿದ್ದಾರೆ. ದೀಪಾವಳಿಗೂ ಮುನ್ನ 25 ಸಾವಿರ ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ.
ಮುಂದಿನ ತಿಂಗಳಿನಿಂದ ಮಂಡಿಗಳಲ್ಲಿ ಹೊಸ ಖಾರಿಫ್ ಬೆಳೆ ಆಗಮನ ಆಗುವುದರಿಂದ ಆಮದುಗಳ ಜೊತೆಗೆ ಪೂರೈಕೆ ಪರಿಸ್ಥಿತಿಯನ್ನು ಸುಧಾರಿಸಲಿದೆ. ಅಲ್ಲದೇ ಬೆಲೆಗಳ ಮೇಲಿನ ಒತ್ತಡವನ್ನು ಸಹ ಕಡಿಮೆ ಮಾಡಲಿದೆ ಎಂದಿದ್ದಾರೆ.
ಈಜಿಪ್ಟ್, ಅಫ್ಘಾನಿಸ್ತಾನ ಮತ್ತು ಟರ್ಕಿಯಂತಹ ದೇಶಗಳಿಂದ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಸಚಿವರು, ನಾಫೆಡ್ ಸಹ ತನ್ನದೇ ಆದ ಸಾಮರ್ಥ್ಯದ ಮೇಲೆ ಆಮದು ಮಾಡಿಕೊಳ್ಳುತ್ತದೆ. ಈರುಳ್ಳಿ ಆಮದು ಮತ್ತು ಈರುಳ್ಳಿ ಬೀಜಗಳ ರಫ್ತು ನಿಷೇಧಿಸಲು ಸರ್ಕಾರವು ಕೆಲವು ಮಾನದಂಡಗಳನ್ನು ಸಡಿಲಗೊಳಿಸಿದೆ ಎಂದು ಅವರು ಹೇಳಿದರು.