ಹಿಸ್ಸಾರ್ (ಹರ್ಯಾಣ): ಎರಡನೇ ಮಹಾಯುದ್ಧದಲ್ಲಿ ಹೋರಾಡಿ, ಮಡಿದ ಇಬ್ಬರು ಸಿಪಾಯಿಗಳ ಅಸ್ಥಿಯನ್ನು 75 ವರ್ಷಗಳ ನಂತರ ಸ್ವಗ್ರಾಮಗಳಿಗೆ ತಂದು, ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹರ್ಯಾಣದ ಮೂಲದ ಯೋಧರುಗಳಾದ ಹಿಸ್ಸಾರ್ನ ಪಾಲುರಾಮ್ ಹಾಗೂ ಝಜ್ಜರ್ನ ಹರಿಸಿಂಗ್ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಇಟಲಿಯ ಪೊಗ್ಗಿಯೊ ಆಲ್ಟೋದಲ್ಲಿ ಇಬ್ಬರೂ 1944 ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದರು. ಇದೀಗ ಅವರಿಗೆ ಸ್ವಗ್ರಾಮದಲ್ಲಿ, ಕುಟುಂಬದವರಿಂದ ಅಂತ್ಯಕ್ರಿಯೆ ನಡೆದಿದೆ.
ನಮ್ಮ ಹಿರಿಯರು ದ್ವಿತೀಯ ಮಹಾಯುದ್ಧ(1939-45)ದಲ್ಲಿ ಭಾಗವಹಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಧಾರ್ಮಿಕ ವಿಧಾನದಂತೆ ಅವರ ಅಸ್ಥಿ ತಂದು, ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಪಾಲಿ ರಾಮ್ ಅವರ ಸಂಬಂಧಿ ರಮೇಶ್ ಕೋತ್ ಹೇಳಿದರು.
ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿದಾಗ ಪಾಲುರಾಮ್ ಅವರಿಗೆ 19 ವರ್ಷವಾಗಿತ್ತು. ಬ್ರಿಟಿಷ್ ಇಂಡಿಯನ್ ಸೇನೆಯ 13ನೇ ಫ್ರಂಟಿಯರ್ ಫೋರ್ಸ್ ರೈಫಲ್ಸ್ನ 4ನೇ ಬೆಟಾಲಿಯನ್ನಲ್ಲಿ ಸೈನಿಕರಾಗಿ ಹೋರಾಡಿದ್ದರು ಎಂದು ಅವರು ಮಾಹಿತಿ ನೀಡಿದರು.