ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಯೋಧರ ಗುಂಡೇಟಿಗೆ ಸಾವನ್ನಪ್ಪಿದ ಉಗ್ರರ ಅಂಕಿ-ಅಂಶವನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.
ಭದ್ರತಾ ಪಡೆಗಳು, 2016ರಿಂದ ಕಳೆದ ಮೂರು ವರ್ಷದಲ್ಲಿ 733 ಉಗ್ರರನ್ನು ಹೊಡೆದುರುಳಿಸಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಯಲ್ಲಿ ದಾಖಲೆ ಬಹಿರಂಗಗೊಳಿಸಿದ್ದಾರೆ.
2016ರಲ್ಲಿ 150, 2017ರಲ್ಲಿ 213 ಹಾಗೂ 2018ರಲ್ಲಿ 257 ಉಗ್ರರನ್ನು ಭಾರತೀಯ ಸೇನೆ ಕಾರ್ಯಾಚರಣೆ ಮೂಲಕ ಸದೆಬಡಿದಿದೆ. ಈ ವರ್ಷದಲ್ಲಿ ಜೂನ್ 16ಕ್ಕೆ ಅನ್ವಯವಾಗುವಂತೆ 113 ಭಯೋತ್ಪಾದಕರು ಸೇನೆಯ ಗುಂಡೇಟಿಗೆ ಮೃತಪಟ್ಟಿದ್ದಾರೆ.
2016ರಲ್ಲಿ 322 ಬಾರಿ ಗುಂಡಿನ ಚಕಮಕಿ ನಡೆದಿದ್ದು 15 ನಾಗರಿಕರು, 2017ರಲ್ಲಿ 342 ಗುಂಡಿನ ಕಾಳಗದಲ್ಲಿ 40 ಹಾಗೂ 2018ರಲ್ಲಿ 614 ಗುಂಡಿನ ಚಕಮಕಿಯಲ್ಲಿ 39 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಗಡಿ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಉಗ್ರರ ನಿರ್ಮೂಲನೆಗೆ ಕೇಂದ್ರ ಸರ್ಕಾರ ನಿರ್ದಾಕ್ಷ್ಯಿಣ್ಯ ಕ್ರಮ ತೆಗೆದುಕೊಂಡಿದ್ದು, ಈ ವೇಳೆ ನಮ್ಮ ಯೋಧರು ಹಾಗೂ ನಾಗರಿಕರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿ.ಕಿಶನ್ ರೆಡ್ಡಿ ತಿಳಿಸಿದರು.