ಮೊರಾದಾಬಾದ್ (ಉತ್ತರ ಪ್ರದೇಶ):ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ್ದ ಮೊರಾದಾಬಾದ್ನ ಐವರು ಅರೋಪಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಕಲ್ಲು ತೂರಾಟ ನಡೆಸಿದ್ದ ಆರೋಪಿಗಳಲ್ಲಿ ಕೊರೊನಾ ಪತ್ತೆ.. ಕ್ವಾರಂಟೈನ್ಗೆ 73 ಪೊಲೀಸ್ ಸಿಬ್ಬಂದಿ - ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಕ್ವಾರಂಟೈನ್
ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಕಲ್ಲುತೂರಾಟ ನಡೆಸಿದ್ದ 5 ಆರೋಪಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 73 ಪೇದೆಗಳನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

ಏಪ್ರಿಲ್ 15ರಂದು ಕೊರೊನಾ ಸೋಂಕಿತ ವ್ಯಕ್ತಿಯನ್ನು ಕ್ವಾರಂಟೈನ್ನಲ್ಲಿ ಇರಿಸುವುದಕ್ಕೆ ಕರೆತರಲು, ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಮೊರಾದಾಬಾದ್ಗೆ ತೆರಳಿದ್ದರು. ಈ ವೇಳೆ ಸ್ಥಳೀಯರ ಗುಂಪು, ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿತ್ತು. ಘಟನೆ ಸಂಬಂಧ 17 ಆರೋಪಿಗಳನ್ನು ಬಂಧಿಸಲಾಗಿತ್ತು, ಈ ಪೈಕಿ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಆರೋಪಿಗಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಅವರ ಸಂಪರ್ಕಕ್ಕೆ ಬಂದಿದ್ದ 73 ಪೊಲೀಸರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ವಿವಿಧ ಕೇಂದ್ರಗಳಲ್ಲಿ ಪ್ರತ್ಯೇಕಗೊಳಿಸಿರುವ ಎಲ್ಲ 73 ಪೊಲೀಸ್ ಸಿಬ್ಬಂದಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ತಿಳಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಯಾವುದೇ ತೊಂದರೆ ಇಲ್ಲ, ನಾಗ್ಫಾನಿ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ ಎಂದು ಹೇಳಿದ್ದಾರೆ.