ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಭಾರತ ಸೇರಿದಂತೆ ಜಗತ್ತಿನಾದ್ಯಂತ ರಾಷ್ಟ್ರಗಳಲ್ಲಿ ದೇಣಿಗೆ ಮತ್ತಿತರ ಹೆಸರಿನಲ್ಲಿ ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ವಿವಿಧ ಸಂಸ್ಥೆಗಳ ಇ-ಮೇಲ್ ಖಾತೆಗಳು ಸೈಬರ್ ಖದೀಮರ ವಂಚನೆಗೆ ರಹದಾರಿಯಾಗಿದೆ.
ಕೋವಿಡ್ ಸಂಬಂಧಿತ ಶೇ. 72 ರಷ್ಟು ಸೈಬರ್ ದಾಳಿಗಳು ಅಥವಾ ಫಿಶಿಂಗ್ ಅಟ್ಯಾಕ್ಗಳು ಮಿಂಚಂಚೆ ಮುಖಾಂತರವೇ ನಡೆಯುತ್ತಿದ್ದು, ವ್ಯಕ್ತಿಗಳನ್ನು ಮೋಸದ ಬಲೆಗೆ ಕೆಡವಲು ವಂಚಕರು ಅವರ ವಿಶ್ವಾಸಾರ್ಹ ವ್ಯಕ್ತಿಗಳ ಇ-ಮೇಲ್ ಐಡಿ ಬಳಸಿಕೊಳ್ಳುತ್ತಿದ್ದಾರೆ.
ಶೇ. 13 ರಷ್ಟು ಸೈಬರ್ ದಂಧೆಕೋರರು ವಿವಿಧ ಸಂಸ್ಥೆಗಳ ಆಂತರಿಕ ವಿಶ್ವಾಸಾರ್ಹ ಇ-ಮೇಲ್ ಖಾತೆಗಳ ಮೂಲಕ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ, ಸಂಸ್ಥೆಗಳು ಬಾಹ್ಯ ವಂಚನೆಯ ಇ-ಮೇಲ್ ದಾಳಿಗಳನ್ನು ತಡೆಯಲು, ತಮ್ಮ ಇ-ಮೇಲ್ ಖಾತೆಗಳ ಭದ್ರೆತಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕ್ಲೌಡ್ ಸೆಕ್ಯರಿಟಿ ಸಂಸ್ಥೆ ಬಾರಾಕುಡಾ ನೆಟ್ವರ್ಕ್ನ ವರದಿ ತಿಳಿಸಿದೆ.