ಗರಿಯಾಬಂದ್: ಯಾವುದೇ ಧರ್ಮ ತೆಗೆದುಕೊಂಡರೂ ಮದುವೆಗೆ ಅದರದ್ದೇ ಆದ ಅರ್ಥವಿದೆ, ಮಹತ್ವವಿದೆ. ಮದುವೆ ಎರಡು ಜೀವಿಗಳು ಬಾಂಧವ್ಯದ ಸಂಕೇತ. ಒಬ್ಬಂಟಿಯಾಗಿ ಸಾಗುವ ಹಾದಿಯಲ್ಲಿ ಮತ್ತೊಬ್ಬರನ್ನು ಜಂಟಿಯಾಗಿ ಮಾಡುವ ಕ್ಷಣವೇ ವಿವಾಹ ಬಂಧನ. ಪ್ರೀತಿ ಮತ್ತು ಮದುವೆ ಒಂದೇ ನಾಣ್ಯದ ಎರಡು ಮುಖಗಳು. ಆದರೆ, ಈ ಮದುವೆ ಸಾಮಾನ್ಯ ಮದುವೆಗಿಂತ ತುಸು ಭಿನ್ನ- ವಿಭಿನ್ನ.
ಚತ್ತೀಸಗಢ್ನ ಗರಿಯಾಬಂದ್ ಸಮೀಪದ ಜಾದಪದರ್ ಗ್ರಾಮದ 70 ವರ್ಷದ ವರ 65 ವರ್ಷದ ವಧು ಪರಸ್ಪರ ಪ್ರೀತಿಸಿ ಅಕ್ಷಯ ತೃತೀಯ ದಿನದಂದು ಹಸಿಮಣೆ ಏರಿದ್ದಾರೆ. 70 ವರ್ಷ ವಯಸ್ಸಿನ ರಾಮ್ ನೇತಮ್ ಅವರು ಮದುವೆ ಆಗಿರಲಿಲ್ಲ. ಇದೇ ಗ್ರಾಮದ 65 ವರ್ಷದ ಟಿಲ್ಕಾ ಬಾಯಿ ನೇತಮ್ ಕೂಡ ಮದುವೆ ಬಂಧನಕ್ಕೆ ಸಿಲುಕಿಕೊಂಡಿರಲಿಲ್ಲ. ಈ ಇಬ್ಬರೂ ಪರಸ್ಪರರು ಪ್ರೀತಿಸಿ ಮನೆಯ ಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಪ್ಪಿಸು ಮದುವೆ ಆಗಿ, ಬಾಳ ಇಳಿಸಂಜೆಯಲ್ಲಿ ಜೀವನ ಸಂಗಾತಿ ಆಗಿದ್ದಾರೆ.