ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷದ ಬಳಿಕ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೆ ವಿಶ್ವದ ಅಂಕಿ ಅಂಶ ಗಮನಿಸುವುದಾದರೆ, 2018ರಲ್ಲಿ ವಿಶ್ವದಾದ್ಯಂತ ಸುಮಾರು 690 ಗಲ್ಲು ಶಿಕ್ಷೆ ಪ್ರಕರಣಗಳು 20 ದೇಶಗಳಲ್ಲಿ ವರದಿಯಾಗಿವೆ.
ಅಮೆರಿಕ, ಚೀನಾ, ಸೌದಿ ಅರೇಬಿಯಾ, ವಿಯೇಟ್ನಾ, ಸಿಂಗಪೂರ್ ಮತ್ತು ಜಪಾನ್ನಲ್ಲಿ 690 ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.
ಇದಲ್ಲದೇ ವಿಶ್ವದ 142 ದೇಶಗಳು ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಿವೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ತಿಳಿಸಿದೆ. ಇನ್ನೂ ಭಾರತದ ವಿಷಯಕ್ಕೆ ಬಂದರೆ ಗಲ್ಲು ಶಿಕ್ಷೆಗೆ ಕ್ಷಮಾದಾನ ನೀಡಿದ 29 ದೇಶಗಳ ಸಾಲಿನಲ್ಲಿ ಭಾರತ ನಿಂತಿದೆ.
2017ರ ಸಾಲಿಗೆ ಹೋಲಿಸಿದರೆ ವಿಶ್ವದಾದ್ಯಂತ ಮರಣದಂಡನೆ ವಿಧಿಸುವ ಪ್ರಮಾಣ ಶೇ. 31ರಷ್ಟು ಇಳಿಕೆಯಾಗಿದ್ದು, ಇದೇ ವರ್ಷದಲ್ಲಿ ಸುಮಾರು 993 ಜನರಿಗೆ ಗಲ್ಲು ವಿಧಿಸಲಾಗಿತ್ತು. ಇದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಕಲೆಹಾಕಿರುವ ಅತ್ಯಂತ ಕಡಿಮೆ ಪ್ರಮಾಣದ ಮರಣದಂಡನೆಯ ಅಂಕಿ - ಅಂಶ ಎಂದು ಮಾಹಿತಿ ನೀಡಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯಲ್ಲಿ ಲಭ್ಯವಿರುವ ಪ್ರತ್ಯೇಕ ಮಾಹಿತಿಯ ಪ್ರಕಾರ, ವಿಶ್ವಸಂಸ್ಥೆಯ ಸರಿ ಸುಮಾರು 160ಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯರು ಮರಣದಂಡನೆಯನ್ನು ರದ್ದುಗೊಳಿಸಿವೆ ಇಲ್ಲವೇ ಮರಣದಂಡನೆಯನ್ನು ತಿರಸ್ಕರಿಸಿವೆ.
ಇದರಲ್ಲಿ ಅತೀ ಹೆಚ್ಚು ಗಲ್ಲು ಶಿಕ್ಷೆಗಳು ಕ್ರಮವಾಗಿ ಚೀನಾ, ಇರಾನ್, ಸೌಧಿ ಅರೇಬಿಯಾ, ವಿಯೇಟ್ನಾ ಮತ್ತು ಇರಾಕ್ನಲ್ಲಿ ಜಾರಿಯಾಗಿದೆ. ಆದರೆ ವಿಶ್ವದಲ್ಲೇ ಅತೀ ಹೆಚ್ಚು 1000ದಷ್ಟು ಗಲ್ಲು ಚೀನಾದಲ್ಲಿ ಜಾರಿಯಾಗುತ್ತಿದ್ದು, ರಾಷ್ಟ್ರದ ಸುರಕ್ಷತೆಯ ಕಾರಣ ಚೀನಾದಲ್ಲಿ ನಿಖರ ದಾಖಲೆಗಳು ಲಭ್ಯವಾಗಿಲ್ಲ ಎಂದು ಎನ್ಜಿಒ ಮಾಹಿತಿ ನೀಡಿದೆ.
ಇನ್ನು ವಿಯೇಟ್ನಾ 2018ರಲ್ಲಿ 85 ಗಲ್ಲು ಶಿಕ್ಷೆ ಜಾರಿ ಮಾಡಿದ್ದು, ಮರಣದಂಡನೆ ಜಾರಿ ಮಾಡುವ ವಿಶ್ವದ 5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅಲ್ಲದೆ ಚೀನಾವನ್ನು ಹೊರತುಪಡಿಸಿ ಶೇ.78ರಷ್ಟು ಗಲ್ಲು ಶಿಕ್ಷೆಯೂ ಇರಾನ್, ಸೌಧಿ ಅರೇಬಿಯಾ, ವಿಯೇಟ್ನಾಂ ಹಾಗೂ ಇರಾಕ್ನಲ್ಲಿ ಜಾರಿಯಾಗುತ್ತಿದೆ ಎಂದು ಅಂಕಿ- ಅಂಶ ನೀಡಿದೆ.
ಇನ್ನು 2018ರಲ್ಲಿ ಬರ್ಹೈನ್, ಬಾಂಗ್ಲಾದೇಶ, ಜೋರ್ಡನ್, ಕುವೈಥ್, ಮಲೇಷ್ಯಾ, ಪ್ಯಾಲೇಸ್ತೀನ್ ಮತ್ತು ಯುಎಯಿಯಲ್ಲಿ ಯಾವುದೇ ಗಲ್ಲುಶಿಕ್ಷೆ ಜಾರಿಯಾದ ಬಗ್ಗೆ ಮಾಹಿತಿ ಇಲ್ಲ ಎಂದು ಆ್ಯಮ್ನೆಸ್ಟಿ ತಿಳಿಸಿದೆ. 2018ರಲ್ಲಿ ಒಟ್ಟಾರೆ ಜಗತ್ತಿನಾದ್ಯಂತ 19,336 ಮಂದಿ ಡೆತ್ ವಾರೆಂಟ್ಗೆ ಒಳಗಾಗಿದ್ದಾರೆ. ಅವರಲ್ಲಿ ಹಲವರು ಕ್ಷಮಾದಾನದಂತಹ ನಿಯಮದ ಮೂಲಕ ಗಲ್ಲು ಶಿಕ್ಷೆಯಿಂದ ಪಾರು ಕೂಡಾ ಆಗಿದ್ದಾರೆ.
2018ರ ಅಂತ್ಯದ ವೇಳೆಗೆ 106 ದೇಶಗಳು ಎಲ್ಲ ರೀತಿಯ ಅಪರಾಧಗಳಿಗೆ ಮರಣದಂಡನೆ ಕಾನೂನನ್ನು ರದ್ದುಮಾಡಿದ್ದವು ಮತ್ತು 142 ದೇಶಗಳು (ಮೂರನೇ ಎರಡರಷ್ಟು) ಮರಣದಂಡನೆ ಕಾನೂನು ಅಥವಾ ಆಚರಣೆಯನ್ನು ರದ್ದುಗೊಳಿಸಿದ್ದವು.