ಜಮ್ಮು:ಕಾಶ್ಮೀರ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳನ್ನು ಬಲ್ಲವರು ಈ ನೆಲವನ್ನು ಈಗ ಭೂಲೋಕದ ಸ್ವರ್ಗವೆಂದು ಕರೆಯಲಾರರು. ಕಳೆದ ನಾಲ್ಕು ತಿಂಗಳಲ್ಲಿ ಉಗ್ರರು ನೂರಾರು ಜನರನ್ನು ಆಹುತಿ ತೆಗೆದುಕೊಂಡಿದ್ದಾರೆ.
2019ರ ಕ್ಯಾಲೆಂಡರ್ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಉಗ್ರರ 177 ಭಯೋತ್ಪಾದನಾ ಸಂಬಂಧಿತ ಕೃತ್ಯಗಳಿಗೆ 61 ಭದ್ರತಾ ಸಿಬ್ಬಂದಿ, 11 ಜನ ನಾಗರಿಕರು ಸಾವನ್ನಪ್ಪಿದ್ದು, 142 ಜನರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ರೋಹಿತ್ ಚೌಧರಿ ಅವರು, ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅರ್ಜಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಮೃತರ ಹಾಗೂ ಗಾಯಗೊಂಡವರ ವಿವರ ಹಂಚಿಕೊಂಡಿದೆ.
ಗಾಯಗೊಂಡವರಲ್ಲಿ 73 ಭದ್ರತಾ ಸಿಬ್ಬಂದಿ ಹಾಗೂ 69 ನಾಗರಿಕರು ಇದ್ದಾರೆ. ಈ ಅವಧಿಯಲ್ಲಿ 83 ಉಗ್ರರನ್ನು ಹೊಡೆದು ಉರುಳಿಸಿದ್ದೇವೆ. ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದು ಉತ್ತರ ಲೆಮಂಡ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ 450ಕ್ಕೂ ಅಧಿಕ ಭಯೋತ್ಪಾದಕರು ಸಕ್ರಿಯವಾಗಿ ಉಗ್ರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಕೃಪಾಪೋಷಿತ 16 ಭಯೋತ್ಪಾದನಾ ತರಬೇತಿ ಶಿಬಿರಗಳು ಕಾರ್ಯಚರಣೆಯಲ್ಲಿವೆ. ಈಗಾಗಲೇ 86ಕ್ಕೂ ಅಧಿಕ ಭಯೋತ್ಪಾದನಾ ಕೃತ್ಯಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ತಿಳಿಸಿದ್ದಾರೆ.