ತೂತುಕುಡಿ (ತಮಿಳುನಾಡು):ಎಐಎಡಿಎಂಕೆ ಹಾಗೂ ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ಪ್ರರಕಣ ಸಂಬಂಧ ತಮಿಳುನಾಡು ಪೊಲೀಸರು ಉಭಯ ಪಕ್ಷಗಳ 604 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ತಮ್ಮ ಪಕ್ಷದ ಬಾವುಟ ಹಾರಿಸುವ ಕುರಿತು ಆರಂಭವಾದ ಗಲಾಟೆ ತೀವ್ರ ಸ್ವರೂಪ ತಳೆದು ಎರಡೂ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಈ ಪ್ರಕರಣ ಸಂಬಂಧ ಶಾಸಕರಾದ ಚೆಲ್ಲಪ್ಪಾ ಹಾಗೂ ಗೀತಾ ಜೀವನ್ ಸೇರಿ ಒಟ್ಟು 604 ಮಂದಿಯ ವಿರುದ್ಧ ಎಫ್ಐಆರ್ ಹಾಕಲಾಗಿದೆ.
ಘಟನಾ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ವಿಲಾತಿಕುಲಂ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.
ಎಐಎಡಿಎಂಕೆ ತೊರೆದು ಇತ್ತೀಚೆಗೆ ಡಿಎಂಕೆ ಸೇರಿದ್ದ ಮಾರ್ಕಂಡೇಯನ್, ವಿಲಾತಿಕುಲಂನಲ್ಲಿ ಡಿಎಂಕೆ ಧ್ವಜವನ್ನು ಹಾರಿಸಲು ಪೊಲೀಸರಿಂದ ಅನುಮತಿ ಪಡೆದಿದ್ದರು ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಹಾಗೂ ಕೋವಿಡ್-19 ಮಾನದಂಡಗಳ ಅನುಸಾರವಾಗಿ 200 ಬೆಂಬಲಿಗರೊಂದಿಗೆ ಧ್ವಜ ಹಾರಾಟ ನಡೆಸಲು ಅವರಿಗೆ ಅನುಮತಿ ನೀಡಲಾಗಿತ್ತು.
ಇದೇ ವೇಳೆ ವಿಲಾತಿಕುಲಂ ಶಾಸಕ ಚಿನ್ನಪ್ಪನ್ ನೇತೃತ್ವದಲ್ಲಿ ಎಐಎಡಿಎಂಕೆ ಕಾರ್ಯಕರ್ತರೂ ಕೂಡ ಜಮಾಯಿಸಿ ಪೊಲೀಸರ ಅನುಮತಿ ಪಡೆಯದೆ ಧ್ವಜ ಹಾರಾಟಕ್ಕೆ ಯತ್ನಿಸಿದ್ದಾರೆ. ಈ ವೇಳೆ ಎಐಎಡಿಎಂಕೆ ಹಾಗೂ ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಪೊಲೀಸರು ಲಘು ಲಾಠಿ ಪ್ರವಾಹ ನಡೆಸಿದ್ದಾರೆ. ಈ ಘಟನೆಯಲ್ಲಿ ಶಾಸಕರೊಬ್ಬರು ಹಾಗೂ ಡಿಎಸ್ಪಿ ಕಲೈ ಕದಿರನ್ಗೆ ಸಣ್ಣಪುಟ್ಟ ಗಾಯಗಳಾಗಿವೆ.