ನೋಯ್ಡಾ(ಉತ್ತರ ಪ್ರದೇಶ): ಭಾರಿ ಪ್ರಮಾಣದ ಮಂಜು ಮುಸುಕಿದ ವಾತಾವರಣದಿಮದ ರಸ್ತೆ ಕಾಣದೆ ಕಾರೊಂದು ಕಾಲುವೆಗೆ ಉರುಳಿಬಿದ್ದು 6 ಜನ ಸಾವಿಗೀಡಾಗಿದ್ದಾರೆ.
ಉತ್ತರ ಭಾರತದಲ್ಲಿ ತಾಪಮಾನ ಕಡಿಮೆಯಾಗಿದ್ದು, ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನೋಯ್ಡಾ ಬಳಿ ರಸ್ತೆ ಕಾಣದೆ ಕಾರು ಕಾಲುವೆಗೆ ಉರುಳಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ 6 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
11 ಜನರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ತಡರಾತ್ರಿ ಡಂಕೌರ್ ಪ್ರದೇಶದ ಬಳಿ ಖೇರ್ಲಿ ಕಾಲುವೆಗೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಎಲ್ಲಾ 11 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಉಳಿದ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರು ಉತ್ತರ ಪ್ರದೇಶದ ಸಂಬಾಲ ಮೂಲದವರಾಗಿದ್ದು, ನವದೆಹಲಿಗೆ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.