ನವದೆಹಲಿ/ರಾಜಸ್ಥಾನ: ಹೈದರಾಬಾದ್‌ನ ಪಶುವೈದ್ಯೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನ ಸುಟ್ಟ ಪ್ರಕರಣ ಇನ್ನೂ ಜನಮಾನಸದಿಂದ ಮರೆಯಾಗುವ ಮುನ್ನವೇ ದೇಶದಲ್ಲಿ ಮತ್ತೆ ಬೆಚ್ಚಿಬೀಳಿಸುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೊರಬರುತ್ತಿವೆ.
ಪ್ರಕರಣ 1:6 ವರ್ಷದ ಮುಗ್ಧ ಬಾಲಕಿಯ ಮೇಲೆರಗಿದ ಕಾಮುಕರು ಅತ್ಯಾಚಾರ ಮಾಡಿ ನಂತರ ಅವಳನ್ನು ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದಲ್ಲಿ ಅಪ್ರಾಪ್ತೆಯ ರೇಪ್- ಮರ್ಡರ್ ಟೊಂಕ್ ಜಿಲ್ಲೆಯ ಅಲೀಗಢ್ ಪೊಲೀಸ್ ಠಾಣಾ ಪ್ರದೇಶದ ಹಳ್ಳಿಯೊಂದರಲ್ಲಿ 6 ವರ್ಷದ ಮುಗ್ಧ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಕೊಂದು ಶವವನ್ನು ಪೊದೆಗೆ ಎಸೆದಿದ್ದಾರೆ. ಮಾಹಿತಿಯ ಪ್ರಕಾರ, ಶನಿವಾರ ಮಧ್ಯಾಹ್ನ ಮೂರು ಗಂಟೆಯವರೆಗೆ ಬಾಲಕಿಯನ್ನು ಶಾಲೆಯಲ್ಲಿ ನೋಡಲಾಗಿದ್ದು, ಆ ಬಳಿಕ ಕಾಣೆಯಾಗಿದ್ದಳು. ಇಂದು ಬೆಳಿಗ್ಗೆ ಪೊದೆಗಳ ಮಧ್ಯೆ ಆಕೆಯ ಶವ ಪತ್ತೆಯಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ನಂತರ ಅವಳನ್ನು ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ತನಿಖೆ ಮುಂದುವರೆಸಿದ್ದಾರೆ.
ಪ್ರಕರಣ 2 :ರಾಷ್ಟ್ರ ರಾಜಧಾನಿಯಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆರೋಪಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೆಹಲಿ ಹೊರವಲಯದ ನರೇಲಾ ಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ದೆಹಲಿ ಹೊರವಲಯದ ನರೇಲಾ ಪ್ರದೇಶದಲ್ಲಿ ಘಟನೆ ನಡೆದಿದೆ. ನವೆಂಬರ್ 26 ರ ಸಂಜೆ, ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಬಂದು ಆಮಿಷವೊಡ್ಡಿ ಬಾಲಕಿಯನ್ನ ಕರೆದೊಯ್ದಿದ್ದಾರೆ. ಮಗಳು ಕಾಣದಿದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಟ ಶುರು ಮಾಡಿದ್ದು, ಪೊದೆಗಳ ಮಧ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಸಿಕ್ಕಿದ್ದಾಳೆ. ಆಸ್ಪತ್ರೆಗೆ ಕರೆದೊಯ್ದ ಮೇಲೆಯೇ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದೆ.
ಬಾಲಕಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ನರೇಲಾ ಸತ್ಯವಡಿ ರಾಜ ಹರಿಶ್ಚಂದ್ ಆಸ್ಪತ್ರೆಯಿಂದ ರೋಹಿಣಿ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ನಡೆದು ಮೂರು ದಿನಗಳಾದರೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.