ಪಣಜಿ(ಗೋವಾ): 51 ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು (ಐಎಫ್‌ಎಫ್‌ಐ) ಪಣಜಿಯಲ್ಲಿರುವ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಇಂದಿನಿಂದ ಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.
51 ನೇ ಐಎಫ್‌ಎಫ್‌ಐ 2021ರ ಜನವರಿ 16 ರಿಂದ 24 ರವರೆಗೆ ಗೋವಾದಲ್ಲಿ ನಡೆಯುತ್ತಿದ್ದು, ಇಂದು ಕಾರ್ಯಕ್ರಮ ಉದ್ಘಾಟಿಸಲಾಯಿತು. ಉತ್ಸವವನ್ನು ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ಆಯೋಜಿಸುತ್ತಿದೆ.
ಕೋವಿಡ್-19 ಹಿನ್ನೆಲೆ ಈ ಆವೃತ್ತಿಯನ್ನು ಮೊದಲ ಬಾರಿಗೆ ಹೈಬ್ರಿಡ್ ಮೋಡ್‌ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಉತ್ಸವಕ್ಕಾಗಿ ಪ್ರಸಿದ್ಧ ಚಲನಚಿತ್ರಗಳನ್ನು ಆಯ್ಕೆಮಾಡಿಕೊಂಡಿದ್ದು, ವಿಶ್ವಾದ್ಯಂತ ಒಟ್ಟು 224 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಭಾರತೀಯ ಪನೋರಮಾ ಚಲನಚಿತ್ರಗಳ ವಿಭಾಗದ ಅಡಿ 21 ನಾನ್ ಫೀಚರ್ ಚಲನಚಿತ್ರಗಳು ಮತ್ತು 26 ಫೀಚರ್ ಚಲನಚಿತ್ರಗಳನ್ನು ಒಳಗೊಂಡಿದೆ.
1952 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್‌ಎಫ್‌ಐ) ಏಷ್ಯಾದ ಅತ್ಯಂತ ಮಹತ್ವದ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಪ್ರಸ್ತುತ ಗೋವಾದಲ್ಲಿ ವಾರ್ಷಿಕವಾಗಿ ನಡೆಯುತ್ತಿದ್ದು, ಉತ್ಸವವು ಚಿತ್ರರಂಗದ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಮತ್ತು ಜಾಗತಿಕ ಸಿನಿಮಾಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತಿದೆ. ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೀತಿಗಳ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಚಲನಚಿತ್ರ ಸಂಸ್ಕೃತಿಗಳ ತಿಳಿವಳಿಕೆ ಮತ್ತು ಮೆಚ್ಚುಗೆಗೆ ಕೊಡುಗೆ ನೀಡುವುದು ಮತ್ತು ಜಗತ್ತಿನ ಜನರಲ್ಲಿ ಸ್ನೇಹ ಮತ್ತು ಸಹಕಾರವನ್ನು ಉತ್ತೇಜಿಸುತ್ತಿದೆ.
ಇನ್ನು ಈ ವರ್ಷ ಅಂತಾರಾಷ್ಟ್ರೀಯ ತೀರ್ಪುಗಾರ ಸಮಿತಿಯಲ್ಲಿ ಅಧ್ಯಕ್ಷರಾಗಿ ಪ್ಯಾಬ್ಲೊ ಸೀಸರ್ (ಅರ್ಜೆಂಟೀನಾ), ಪ್ರಸನ್ನ ವಿಥಾನಗೆ (ಶ್ರೀಲಂಕಾ), ಅಬೂಬಕರ್ ಶಾಕಿ (ಆಸ್ಟ್ರಿಯಾ), ಪ್ರಿಯದರ್ಶನ್ (ಭಾರತ) ಮತ್ತು ಶ್ರೀಮತಿ ರುಬಯ್ಯತ್ ಹುಸೈನ್ (ಬಾಂಗ್ಲಾದೇಶ) ಇದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.