2020ರ ಕೇಂದ್ರ ಬಜೆಟ್, ಕೃಷಿ ಕುರಿತಂತೆ ಒಂದು ಸ್ಪಷ್ಟ ಸಂದೇಶ:ಮೋದಿ ಸರ್ಕಾರ ಸುಸ್ಥಿರ ಕೃಷಿಗೆ (ಸಾವಯವ ಮತ್ತು ಜೈವಿಕ ವ್ಯವಸಾಯ ) ಬದ್ಧವಾಗಿದೆ. 2020- 21ರ ವೇಳೆಗೆ 4 ಲಕ್ಷ ಹೆಕ್ಟೇರ್‌ಗೆ ಸಾವಯವ ಕೃಷಿಯ ವ್ಯಾಪ್ತಿ ಹೆಚ್ಚಿಸುವ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾವ್ಯದ ಮೂಲಕ ಮಂಡಿಸಿದರು. ಹಸಿರು ಕ್ರಾಂತಿಯ ಬಜೆಟ್ ಅಡಿಯಲ್ಲಿ ಸಾವಯವ ಪ್ರಮಾಣೀಕರಣದ ಮೂಲಕ ವ್ಯಾಪ್ತಿ ಹೆಚ್ಚಿಸಲು ಪರಂಪರಾಗತ ವಿಕಾಸ್ ಕೃಷಿ ಯೋಜನೆ ( ಸಿಎಸ್ ಎಸ್ )ಗೆ ರೂ. 500 ಕೋಟಿ ನೀಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ 0.51 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸಾವಯವ ಪ್ರಮಾಣೀಕರಣ ವ್ಯಾಪ್ತಿ ಅಡಿ ತರಲಾಗಿದೆ. ಇದು ಸ್ಥಳೀಯ ಬಳಕೆ ಮತ್ತು ರಫ್ತಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾವಯವ ಆಹಾರ ಉತ್ಪಾದನೆಯನ್ನು ಹೆಚ್ಚಿಸುತ್ತದೆ. 2018 - 19ರಲ್ಲಿ ಭಾರತೀಯ ಸಾವಯವ ರಫ್ತು 5,151 ಕೋಟಿ ರೂ. ಎಂದು ಎಪಿಇಡಿಎ ಅಂದಾಜಿಸಿದ್ದು, ಇದು 2017-19ಕ್ಕೆ ಹೋಲಿಸಿದರೆ ಶೇ. 49ರಷ್ಟು ಹೆಚ್ಚಾಗಿದೆ.
ಅರ್ಥ ಸಚಿವರು ಘೋಷಿಸಿದ ಇತರ ಶ್ಲಾಘನೀಯ ಕ್ರಮಗಳು ಎಂದರೆ ಕೃಷಿ- ಪರಿಸರ ಅಭ್ಯಾಸಗಳು ಭಾರತದ ವ್ಯವಸಾಯ ಕ್ಷೇತ್ರಕ್ಕೆ ಪೂರಕವಾಗಿ ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ‘ಜೈವಿಕ್ ಖೇತಿ’ ಎಂಬ ಕೃಷಿ ಆನ್‌ಲೈನ್ ಪೋರ್ಟಲ್ಅನ್ನು ರಚಿಸಿರುವುದು ಮತ್ತು 'ಧಾನ್ಯ ಲಕ್ಷ್ಮಿ'ಯನ್ನು ಸದೃಢಗೊಳಿಸುವ ಗ್ರಾಮ ಸಂಗ್ರಹ ಯೋಜನೆ ಜಾರಿಗೆ ತಂದಿರುವುದು. ಮೋದಿ ಸರ್ಕಾರದ ವಿಷನ್ನಿನ 8 ನೇ ಆಯಾಮ ಎಂದು ಕರೆಸಿಕೊಂಡ ಸಾವಯವ ಆಹಾರ ಉತ್ಪಾದನೆಯನ್ನು ಸ್ಥಿರ ರೀತಿಯಲ್ಲಿ ಮುಂದುವರಿಸುವ ಪೀಯುಷ್ ಗೋಯಲ್ ಅವರ 2019ರ ಬಜೆಟ್ ಭಾಷಣದೊಂದಿಗೆ ಇದು ನಂಟು ಹೊಂದಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗೆ ಅನುಗುಣವಾಗಿ ಪ್ರಸ್ತುತ ಬಜೆಟ್ ಇದೆ ಮತ್ತು ಪರಿಸರ ಜಾಗೃತಿ ಉಳ್ಳ ಗ್ರಾಹಕರು ಮತ್ತು ಸ್ವದೇಶಿ ಬೆಂಬಲಿಗರಿಗೆ ಸಮಾಧಾನಕರವಾಗಿ ಇದೆ.
ಆದರೆ ಈ ಮಧ್ಯೆ, ಎಪಿಇಡಿಎ ಸಾವಯವ ರಫ್ತು ಹೆಚ್ಚಳವನ್ನು 2025ರ ವೇಳೆಗೆ 50 ಶತಕೋಟಿ ಡಾಲರ್ ತಲುಪಲು ಯೋಜಿಸಿದೆ. ಭಾರತದಲ್ಲಿ ಅಷ್ಟು ದೊಡ್ಡಮಟ್ಟದಲ್ಲಿ ಯಾರು ಸಾವಯವ ಬೇಸಾಯ ಮಾಡುತ್ತಿದ್ದಾರೆ ಎಂದು ಸಾವಯವ ಮತ್ತು ಬೀಜ ಕ್ಷೇತ್ರದ ಅನೇಕ ಅನುಭವಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಮ್ಮಲ್ಲಿ ಪ್ರಮಾಣೀಕೃತ ಸಾವಯವ ಬೀಜ ಸಾಕಷ್ಟು ಇದೆಯೇ? ದೇಸಿ ತಳಿಗಳು ಅಥವಾ ಸಾಂಪ್ರದಾಯಿಕ ವೈವಿಧ್ಯಮಯ ಬೀಜಗಳನ್ನು ಅವಲಂಬಿಸಿ ಈ ಪ್ರಮಾಣದ ರಫ್ತು ಮಾಡಲು ಸಾಧ್ಯ ಇಲ್ಲ. ಈ ಬೆಳವಣಿಗೆಗೆ ಅನುಗುಣವಾಗಿ ಸಾವಯವ ಬೀಜಗಳನ್ನು ಉತ್ಪಾದನೆ ಮಾಡಲು ನಮಗೆ ಹೆಚ್ಚು ಪರಿಣಾಮಕಾರಿ ಕಾರ್ಯವಿಧಾನಗಳು ಬೇಕಾಗುತ್ತವೆ. ಅಲ್ಲದೆ ಇದೇ ಬಗೆಯ ಉಚ್ಛ್ರಾಯ ಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ರೈತರಿಗೆ ಅತ್ಯುತ್ತಮ ಗುಣಮಟ್ಟದ ಸಾವಯವ ಬೀಜಗಳ ಅಗತ್ಯ ಇದೆ.
ಸಂಸ್ಕರಿಸದೇ ಇರುವುದೆಲ್ಲ ಸಾವಯವ ಬೀಜ ಅಲ್ಲ:
ಭಾರತದಲ್ಲಿ ಬಹುತೇಕ ಮಂದಿ ಸಂಸ್ಕರಿಸದ ಬೀಜಗಳನ್ನು (ಶಿಲೀಂಧ್ರನಾಶಕ ಅಥವಾ ರಾಸಾಯನಿಕಗಳಲ್ಲಿ ಮೊದಲೇ ನೆನೆಸಿದ ಬೀಜ) ಸಾವಯವ ಎಂದು ಬಗೆದು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ಅದು ಅವರ ತಪ್ಪು ತಿಳಿವಳಿಕೆ. ಕೃಷಿ - ಪರಿಸರ ಪದ್ಧತಿ ಮೂಲಕ ಬೀಜವನ್ನು ಸಾವಯವ ಮಣ್ಣಿನಲ್ಲಿ ಬೆಳೆಸಿ ಸಾವಯವ ಪ್ರಮಾಣ ಪತ್ರ ಪಡೆದಿದ್ದರೆ ಮಾತ್ರ ಅದನ್ನು ಸಾವಯವ ಬೆಳೆ ಎಂದು ಕರೆಯಬಹುದು. ಅಮೆರಿಕ ಅಥವಾ ಜರ್ಮನಿಯ ಸ್ಪರ್ಧಾತ್ಮಕ ಮತ್ತು ಸಂಶೋಧನೆ ಆಧಾರಿತ ಸಾವಯವ ಬೀಜೋದ್ಯಮಕ್ಕೆ ಹೋಲಿಕೆ ಮಾಡಿದರೆ ನಮ್ಮ ಸಾವಯವ ಬೀಜ ಉದ್ಯಮ ಬಹಳ ಹಳೆಯ ಮಾದರಿಯಲ್ಲಿ ಇದ್ದು ಅಧಿಕ ದಕ್ಷತೆಯ ಸಾವಯವ ಬೀಜಗಳನ್ನು ಖರೀದಿಸುವ ಆಯ್ಕೆ ಬಹಳ ಕಡಿಮೆ ಇದೆ.
ಸಾವಯವ ಆಹಾರಕ್ಕಾಗಿ ಬೇಡಿಕೆ ಹೆಚ್ಚಿರುವುದರಿಂದ, ನಿಯಮಗಳು ಮತ್ತು ಮಾನದಂಡಗಳು ಕಠಿಣವಾಗುತ್ತ ಹೋಗುತ್ತವೆ. ಎಲ್ಲಾ ಸಾವಯವ ಪ್ರಮಾಣೀಕರಣ ಕಾರ್ಯವಿಧಾನಗಳು ಒಮ್ಮತದಿಂದ ಹೇಳುವುದು ಏನೆಂದರೆ: ಸಾವಯವ ಆಹಾರ ಬೆಳೆಯಲು ಬಳಸುವ ಎಲ್ಲಾ ಬೀಜಗಳನ್ನು ಪ್ರಮಾಣೀಕರಿಸಬೇಕಿದೆ. ಸಾವಯವ ಪ್ರಮಾಣೀಕರಿಸುವ ಏಜೆನ್ಸಿಗಳಿಗೆ ಬೀಜದಲ್ಲಿನ ಅವಶೇಷಗಳನ್ನು ಪತ್ತೆ ಹಚ್ಚಲು ಈಗ ಇರುವ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ. ಭವಿಷ್ಯದ ಸಾವಯವ ವ್ಯಾಪಾರದಲ್ಲಿ, ವಿಶೇಷವಾಗಿ ಐರೋಪ್ಯ ಒಕ್ಕೂಟ ಮತ್ತು ಅಮೆರಿಕಕ್ಕೆ ಇದು ನಿರ್ಣಾಯಕ ಹಂತ ಆಗಬಹುದು.