ನವದೆಹಲಿ:ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಶುಕ್ರವಾರ ಉಂಟಾದ ಘರ್ಷಣೆ ಸಂಬಂಧ 44 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ರೈತರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿತ್ತು. ರೈತರು ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಅಲ್ಲದೆ ಎರಡು ಗುಂಪಿನ ನಡುವೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಪ್ರತಿಭಟನಾಕಾರರನ್ನ ಪೊಲೀಸರು ಚದುರಿಸಲು ಮುಂದಾಗಿದ್ದ ವೇಳೆ ವ್ಯಕ್ತಿಯೋರ್ವ ಪೊಲೀಸ್ ಕಾನ್ಸ್ಟೇಬಲ್ ಮೇಲೆ ತಲ್ವಾರ್ ಬೀಸಿರುವ ಘಟನೆ ನಡೆದಿದೆ. ಪರಿಣಾಮ ಅಲಿಪುರ್ ಎಸ್ಹೆಚ್ಒ ಪ್ರದೀಪ್ ಪಲಿವಾಲ್ ಎಂಬುವರು ಗಾಯಗೊಂಡಿದ್ದರು. ಈ ಸಂಬಂಧ ನವಾನ್‌ಶಹರ್ ನಿವಾಸಿ ರಂಜೀತ್ ಸಿಂಗ್ ಸೇರಿದಂತೆ 44 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ವಲಯ ವಿಶೇಷ ಪೊಲೀಸ್ ಆಯುಕ್ತ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ವಿರುದ್ಧ ಹೋರಾಟಕ್ಕೆ ಸಹಭಾಗಿತ್ವ: ಬಹ್ರೇನ್ ಪ್ರಧಾನಿಗೆ ಮೋದಿ ಧನ್ಯವಾದ
ಸುಮಾರು 200ಕ್ಕೂ ಹೆಚ್ಚು ಜನರ ಗುಂಪು ಶುಕ್ರವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಧ್ವಜಗಳನ್ನು ಹಿಡಿದು ಆಗಮಿಸಿತ್ತು. ರೈತರು ಪ್ರದೇಶವನ್ನು ತೊರೆಯಬೇಕೆಂದು ಬಯಸಿದ್ದ ಗುಂಪು ರೈತರ ವಿರುದ್ಧ ಘೋಷಣೆ ಕೂಗಿದ ಹಿನ್ನೆಲೆ ಘರ್ಷಣೆ ನಡೆದಿತ್ತು ಎನ್ನಲಾಗಿದೆ.