ಹೈದರಾಬಾದ್ :ಕೋವಿಡ್-19 ಸೃಷ್ಠಿಸಿದ ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತ ಕನಿಷ್ಠ 4 ಕೋಟಿ ಮಕ್ಕಳು ತಮ್ಮ ಆರಂಭಿಕ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.
UNICEF(ವಿಶ್ವಸಂಸ್ಥೆಯ ಮಕ್ಕಳ ನಿಧಿ)ನ 'ಇನೋಸೆಂಟಿ' ಪ್ರಕಟಿಸಿದ ಹೊಸ ಸಂಶೋಧನಾ ಸಂಕ್ಷಿಪ್ತ ವರದಿಯಲ್ಲಿ ಈ ಬಗ್ಗೆ ತಿಳಿಸಿದೆ. "ಕೋವಿಡ್ -19 ಪರಿಸ್ಥಿತಿಯಿಂದ ಉಂಟಾಗುವ ಶೈಕ್ಷಣಿಕ ಅಡೆತಡೆಯು ಮಕ್ಕಳು ಉತ್ತಮ ಶಿಕ್ಷಣದ ಆರಂಭ ಪಡೆಯದಂತೆ ತಡೆಯುತ್ತಿದೆ" ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ.
ಶಿಶುಪಾಲನಾ ಕೇಂದ್ರಗಳು ಮತ್ತು ಬಾಲ್ಯದ ಶಿಕ್ಷಣವು ಮಕ್ಕಳ ಬೆಳವಣಿಗೆಯ ಪ್ರತಿ ಅಂಶವನ್ನು ನಿರ್ಧರಿಸುತ್ತದೆ. ಅಲ್ಲದೆ ಇವು ಮಕ್ಕಳ ಬೆಳವಣಿಗೆಗೆ ಉತ್ತಮ ಅಡಿಪಾಯ ನಿರ್ಮಿಸುತ್ತದೆ. ಆದರೆ, ಈ ಸಾಂಕ್ರಾಮಿಕ ರೋಗವು ಆ ಅಡಿಪಾಯವನ್ನೇ ಗಂಭೀರ ಬೆದರಿಕೆಗೆ ಒಳಪಡಿಸುತ್ತಿದೆ ಎಂದು ಹೆನ್ರಿಯೆಟಾ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಬಿಕ್ಕಟ್ಟಿನಲ್ಲಿ ಶಿಶುಪಾಲನೆ :ಲಾಕ್‌ಡೌನ್, ಶಿಶುಪಾಲನೆ ಮೇಲೆ ಭಾರಿ ಪರಿಣಾಮ ಬೀರಿದೆ. ಬದುಕಿನ ಬಂಡಿ ಓಡಿಸಲು ಮಾಡಬೇಕಾದ ಕೆಲಸ ಹಾಗೂ ಶಿಶುಪಾಲನೆ ಹೆತ್ತವರಿಗೆ ದೊಡ್ಡ ಸವಾಲಾಗಿದೆ. ಈ ಲಾಕ್‌ಡೌನ್ ಅನೇಕ ಪೋಷಕರನ್ನು, ಶಿಶುಪಾಲನೆ ಮತ್ತು ತಮ್ಮ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಲು ಹೆಣಗಾಡುವಂತೆ ಮಾಡಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಕುಟುಂಬಗಳಲ್ಲಿ ಈ ಲಾಕ್‌ಡೌನ್ ಆಳವಾದ ಬಿಕ್ಕಟ್ಟನ್ನು ತಂದಿಟ್ಟಿದೆ. ಮಕ್ಕಳಿಗೆ ಪ್ರೀತಿ, ವಾತ್ಸಲ್ಯ, ರಕ್ಷಣೆ, ಪ್ರೇರಣೆ ಮತ್ತು ಪೋಷಣೆಯನ್ನು ಒದಗಿಸುವಲ್ಲಿ ಶಿಶುಪಾಲನೆ ತುಂಬಾ ಅಗತ್ಯ. ಇದು ಮಕ್ಕಳಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಅರಿವಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಜಗತ್ತಿನಲ್ಲಿ ಸುಮಾರು 3 ಕೋಟಿ 50 ಲಕ್ಷಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳು ಕೆಲವೊಮ್ಮೆ ಹಿರಿಯರ ಮೇಲ್ವಿಚಾರಣೆಯಿಲ್ಲದೆ ಉಳಿದಿವೆ ಎನ್ನುವ ಸತ್ಯಾಂಶವನ್ನು ಯುನಿಸೆಫ್ ಬಿಚ್ಚಿಟ್ಟಿದೆ.
ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವ ತಾಯಂದಿರು ತಮ್ಮ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಕರೆತರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅವರಿಗೆ ಶಿಶುಪಾಲನೆ ಮತ್ತು ಅವರ ಆರಂಭಿಕ ಶಿಕ್ಷಣದ ಆಯ್ಕೆಗಳೇ ಇಲ್ಲವಾಗಿದೆ. ಆಫ್ರಿಕಾದ 10 ಮಹಿಳೆಯರಲ್ಲಿ 9ಕ್ಕಿಂತ ಹೆಚ್ಚು ಮತ್ತು ಏಷ್ಯಾದಲ್ಲಿ ಸುಮಾರು 10 ರಲ್ಲಿ 7 ಮಹಿಳೆಯರು ಇಂತಹ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಅವರು ಯಾವುದೇ ರೀತಿಯ ಸಾಮಾಜಿಕ ರಕ್ಷಣೆಗೆ ಪ್ರವೇಶ ಪಡೆದಿಲ್ಲ. ಕಡಿಮೆ ಸಂಬಳ ಪಡೆಯುವ ಉದ್ಯೋಗದಲ್ಲಿ ಸಿಕ್ಕಿ ಹಾಕಿಕೊಂಡು ತಮ್ಮ ಮಕ್ಕಳ ಪೋಷಣೆಯೂ ಅವರಿಗೆ ದೊಡ್ಡ ಸವಾಲಾಗಿದೆ.
ಕುಟುಂಬದ ಸನ್ನಿವೇಶಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳು ಉತ್ತಮ ಗುಣಮಟ್ಟದ, ವಯಸ್ಸಿಗೆ ಸೂಕ್ತವಾದ ಕೈಗೆಟುಕುವ ಮತ್ತು ಸೂಕ್ತ ಶಿಶುಪಾಲನಾ ಕೇಂದ್ರಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು ಸೇರಿ ಸರ್ಕಾರಗಳು ಮತ್ತು ಉದ್ಯೋಗದಾತರು ತಮ್ಮ ಶಿಶುಪಾಲನಾ ಮತ್ತು ಬಾಲ್ಯದ ಶಿಕ್ಷಣ ನೀತಿಗಳನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಈ ಸಂಶೋಧನೆಯು ಸಂಕ್ಷಿಪ್ತ ಮಾರ್ಗದರ್ಶನ ನೀಡಿದೆ.
ಮಾರ್ಗದರ್ಶನವು ಕುಟುಂಬ-ಸ್ನೇಹಿ ನೀತಿಗಳನ್ನು ಒಳಗೊಂಡಿದೆ..
- ಎಲ್ಲಾ ಪೋಷಕರಿಗೆ ಸಂಬಳ ನೀಡಿ ರಜೆ ನೀಡುವುದು
- ಕೆಲಸ ಮಾಡುವ ಪೋಷಕರ ಅಗತ್ಯಕ್ಕೆ ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆ
- ತರಬೇತಿ ಸೇರಿ ಕುಟುಂಬೇತರ ಶಿಶುಪಾಲನಾ ಕಾರ್ಯಪಡೆಯ ಮೇಲೆ ಹೂಡಿಕೆ
- ಅಸಂಘಟಿತ ವಲಯದದಲ್ಲಿ ಕೆಲಸ ಮಾಡುವ ಕುಟುಂಬಗಳನ್ನು ತಲುಪುವಂತೆ ನಗದು ವರ್ಗಾವಣಾ ವ್ಯವಸ್ಥೆ ಹಾಗೂ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆ