ರಾಜಸ್ಥಾನ: ಜೈಪುರದ ಕನೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನರು ಒಟ್ಟಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಯಶ್ವಂತ್ ಸೋನಿ, ಅಜಿತ್ ಸೋನಿ, ಮಮತಾ ಸೋನಿ ಮತ್ತು ಭರತ್ ಸೋನಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆಭರಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಕುಟುಂಬವು ಸಾಲದಿಂದ ತೊಂದರೆಗೀಡಾಗಿತ್ತು ಎಂದು ಹೇಳಲಾಗುತ್ತಿದೆ.
ಮೃತ ಕುಟುಂಬಕ್ಕೆ ಜೈಪುರ ಮತ್ತು ಅಲ್ವಾರ್ನಲ್ಲಿ ಆಭರಣ ಅಂಗಡಿ ಇತ್ತು. ಆಭರಣಗಳ ವ್ಯವಹಾರದಲ್ಲಿ ತೊಂದರೆ ಆದ ಕಾರಣ ಜೈಪುರ ಮತ್ತು ಅಲ್ವಾರ್ ಅಂಗಡಿಗಳನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರು ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳಕ್ಕಾಗಮಿಸಿದ ಡಿಎಸ್ಪಿ ಮನೋಜ್ ಚೌಧರಿ ಮತ್ತು ತಂಡ ಘಟನೆಯ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಪೊಲೀಸರಿಗೆ ಆತ್ಮಹತ್ಯೆ ಸ್ಥಳದಲ್ಲಿ ಯಾವುದೇ ಡೆತ್ನೋಟ್ ದೊರೆತಿಲ್ಲ ಹಾಗೂ ಸಾವಿನ ಕಾರಣ ತಿಳಿದು ಬಂದಿಲ್ಲ.