ಹೈದರಾಬಾದ್:ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಕೊರೊನಾ ವೈರಸ್‌ಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಚೀನಾ ಬಹಿರಂಗಪಡಿಸಿದೆ. ವೈದ್ಯಕೀಯ ಸಾಪ್ತಾಹಿಕ ಜರ್ನಲ್ “ದಿ ಬ್ರಿಟಿಷ್ ಮೆಡಿಕಲ್ ಜರ್ನಲ್”ನಲ್ಲಿ ಪ್ರಕಟವಾಗಿರುವ ತಜ್ಞ ವಿಮರ್ಶಿತ ವರದಿಯ ಪ್ರಕಾರ, ಕೊರೊನಾ ವೈರಸ್ ಸೋಂಕು ತಗಲಿದ ಐದು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳು ಕಾಯಿಲೆಯ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸಿಲ್ಲ. ಕೊರೊನಾ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡಲು ರೋಗದ ಲಕ್ಷಣಗಳು ಕಾಣಿಸಿಕೊಳ್ಳದಿರುವುದೇ ಮುಖ್ಯ ಕಾರಣ ಎಂದು ಹಲವಾರು ತಜ್ಞರು ಹಾಗೂ ಸಂಶೋಧಕರು ಅಭಿಪ್ರಾಯಪಡುತ್ತಿದ್ದಾರೆ.
ಚೀನಾದಲ್ಲಿ ಏಪ್ರಿಲ್ 1 ರಂದು ಪತ್ತೆಯಾದ 166 ಪ್ರಕರಣಗಳ ಪೈಕಿ 130 ಪ್ರಕರಣಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದಿಲ್ಲ ಎನ್ನುತ್ತಾರೆ ಆ ದೇಶದ ರಾಷ್ಟ್ರೀಯ ಆರೋಗ್ಯ ಆಯುಕ್ತರು. ಈ ಮಧ್ಯೆ, ವೈರಸ್ ಮತ್ತಷ್ಟು ಹರಡದಂತೆ ತಡೆಯಲು ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಬೀಜಿಂಗ್, ಸ್ವದೇಶಕ್ಕೆ ಆಗಮಿಸುತ್ತಿರುವ ಚೀನಿ ನಾಗರಿಕರನ್ನು ಕಠಿಣ ಪರೀಕ್ಷೆಗಳಿಗೆ ಒಳಪಡಿಸುತ್ತಿದೆಯಲ್ಲದೇ ಅವರ ಪ್ರಯಾಣವನ್ನು ನಿರ್ಬಂಧಿಸುತ್ತಿದೆ.
“ಕೊರೊನಾ ವೈರಸ್‌ನ ಈ ಹೊಸ ಲಕ್ಷಣಗಳ ಕುರಿತ ವರದಿ ನಿಜಕ್ಕೂ ಅತಿ, ಅತಿ, ಅತೀವ ಮುಖ್ಯವಾಗಿದೆ” ಎನ್ನುತ್ತಾರೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಾಕ್ಷ್ಯಾಧರಿತ ವೈದ್ಯಕೀಯ ಕೇಂದ್ರದಲ್ಲಿ ರೋಗತಜ್ಞ ಹಾಗೂ ಗೌರವ ಸಂಶೋಧನಾ ವ್ಯಕ್ತಿಯಾಗಿರುವ ಟಾಮ್‌ಜೆಫರ್ಸನ್. “ಸದ್ಯಕ್ಕೆ ಈ ಮಾದರಿ ಸಣ್ಣ ಪ್ರಮಾಣದ್ದಾಗಿದ್ದರೂ, ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ, ಈ ಪ್ರಕರಣಗಳನ್ನು ಅದ್ಹೇಗೆ ಪತ್ತೆ ಹಚ್ಚಲಾಯಿತು ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅವನ್ನು ಸರಳೀಕರಿಸಿ ಹೇಳಲಾಗಿದೆ ಎಂದೇ ಭಾವಿಸೋಣ. ಒಂದು ವೇಳೆ ಇಂತಹ ಪ್ರಕರಣಗಳ ಪೈಕಿ ಶೇಕಡಾ ೧೦ರಷ್ಟು ಸರಿಯಾಗಿದ್ದರೂ, ವೈರಸ್ ಎಲ್ಲ ಕಡೆ ಹರಡಿದೆ ಎಂದೇ ಅರ್ಥ. ಒಂದು ವೇಳೆ – ನಾನು ಒತ್ತು ಕೊಟ್ಟು ಹೇಳುತ್ತಿದ್ದೇನೆ, ಒಂದು ವೇಳೆ – ಈ ಫಲಿತಾಂಶಗಳು ಪ್ರಕರಣಗಳಿಗೆ ನೇರವಾಗಿ ಸಂಬಂಧಿಸಿದ್ದೇ ಆದಲ್ಲಿ, ಈ ದಿಗ್ಬಂಧನ ವಿಧಿಸಿದ್ದಾದರೂ ಏಕೆ? ಇದರಿಂದ ನಾವು ಏನನ್ನು ಸಾಧಿಸುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ” ಎಂದಿದ್ದಾರೆ ಅವರು.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಸಂಪರ್ಕದಿಂದಾಗಿ ಇದುವರೆಗೆ 43,000 ರೋಗ ಲಕ್ಷಣ ರಹಿತ ಸೋಂಕು ಪ್ರಕರಣಗಳು ಚೀನಾದಲ್ಲಿ ಬೆಳಕಿಗೆ ಬಂದಿವೆ.