ಕೋಲ್ಕತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದಲ್ಲಿ ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಗೆ ಮಮತಾ ಸರ್ಕಾರದ ನಾಲ್ವರು ಮಂತ್ರಿಗಳು ಗೈರಾಗಿದ್ದರು ಎಂದು ವರದಿಯಾಗಿದೆ. ಈ ನಾಲ್ಕು ಮಂತ್ರಿಗಳ ಅನುಪಸ್ಥಿತಿಯು ಟಿಎಂಸಿಯಲ್ಲಿ ರಾಜೀನಾಮೆ ನೀಡುವ ಪರ್ವ ಶುರುವಾಗಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಗೆ ಗೈರಾದ ನಾಲ್ವರು ಸಚಿವರು ರಜೀಬ್ ಬ್ಯಾನರ್ಜಿ, ರವೀಂದ್ರನಾಥ ಘೋಷ್, ಗೌತಮ್ ದೇಬ್ ಹಾಗೂ ಚಂದ್ರನಾಥ ಸಿನ್ಹಾ. ಅವರಲ್ಲಿ ಮೂವರು ಸಭೆಗೆ ಹಾಜರಾಗದಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಆದ್ರೆ ಅರಣ್ಯ ಸಚಿವ ರಜೀಬ್ ಬ್ಯಾನರ್ಜಿ ಅವರು ಮೌನವಾಗಿಯೇ ಇದ್ದು, ಇದು ರಾಜಕೀಯ ವಲಯಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನು ಹಾಜರಾಗದ ಇತರ ಮಂತ್ರಿಗಳ ಪೈಕಿ ಉತ್ತರ ಬಂಗಾಳದ ಕೂಚ್ ಬೆಹಾರ್‌ನ ಅಭಿವೃದ್ಧಿ ಸಚಿವ ರವೀಂದ್ರನಾಥ ಘೋಷ್ ಕೂಡ ಇದ್ದಾರೆ. ಅವರು ಮಮತಾ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಡೂಯರ್ಸ್ ಅಭಿಯಾನದ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಹಾಗೇ ಡಾರ್ಜಿಲಿಂಗ್ ಜಿಲ್ಲೆಯ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂದಿನ ವಾರ ಮುಖ್ಯಮಂತ್ರಿಯ ಭೇಟಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಬಿರ್ಭಮ್‌ನ ಚಂದ್ರನಾಥ ಸಿನ್ಹಾ ಹೇಳಿದ್ದಾರೆ.