ಕುಶಿನಗರ (ಉತ್ತರ ಪ್ರದೇಶ) : ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಗಂಜ್ ಪಟ್ಟಣದ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ.
ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ; ನಾಲ್ವರ ಸಾವು
ದೀಪಾವಳಿ ಸಮೀಪಿಸುತ್ತಿರುವಂತೆ ಉತ್ತರ ಪ್ರದೇಶದ ವಿವಿಧೆಡೆ ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಅಪಾಯಕಾರಿ ವಿದ್ಯಮಾನಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನಾಹುತದ ಸುದ್ದಿಗಳು ಒಂದರ ಬೆನ್ನ ಹಿಂದೊಂದರಂತೆ ವರದಿ ಆಗುತ್ತಿವೆ.
ಕಪ್ತಗಂಜ್ ವಾರ್ಡ್ ಸಂಖ್ಯೆ 11ರ ಜನನಿಬಿಡ ಪ್ರದೇಶದ ಮನೆಯೊಂದರ ಗೋದಾಮಿನಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಡಲಾಗಿತ್ತು. ಪ್ರದೇಶದ ಪ್ರತಿಯೊಬ್ಬರಿಗೂ ಅಕ್ರಮ ಪಟಾಕಿ ಘಟಕದ ಬಗ್ಗೆ ಗೊತ್ತಿದೆ. ಆದರೆ, ಪಟಾಕಿ ಸಂಗ್ರಹ ಮಾಡಿರುವ ಬಗ್ಗೆ ಅನುಮತಿ ತೆಗೆದುಕೊಂಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಈ ಮೊದಲೂ ಸ್ಫೋಟ ಸಂಭವಿಸಿದ ನಿದರ್ಶನಗಳಿವೆ. ಆದರೆ, ಇದನ್ನು ಸ್ಥಗಿತಗೊಳಿಸುವುದಾಗಲಿ ಅಥವಾ ಸ್ಥಳಾಂತರಗೊಳಿಸುವುದಾಗಲಿ ಯಾವುದೇ ಕ್ರಮ ಕೈಕೊಂಡಿರಲಿಲ್ಲ. ಈ ನಡುವೆ ಘಟಕದಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ದುರಂತ ಸಂಭವಿಸಿದ ಸುದ್ದಿ ಹರಡುತ್ತಿದ್ದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗುತ್ತಿದೆ. ಇನ್ನು ಘಟನೆಯ ಬಗ್ಗೆ ಮಾಧ್ಯಮಗಳು ನಿಖರ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದರೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇನ್ನು ಭಾರೀ ಸ್ಫೋಟದಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.