ನವದೆಹಲಿ: ಕೊರೊನಾ ಅಟ್ಟಹಾಸದಿಂದ ವಿಶ್ವವೇ ಸಂಕಷ್ಟಕ್ಕೆ ಸಿಲುಕಿರುವ ಸ್ಥಿತಿಯಲ್ಲಿ ಆಶಾಕಿರಣವೊಂದು ಮೂಡಿದೆ. ಕೋವಿಡ್-19 ಗೆ ನಾಲ್ಕು ವ್ಯಾಕ್ಸಿನ್‌ಗಳು ಅತಿ ಶೀಘ್ರದಲ್ಲೇ ಪ್ರಾಯೋಗಿಕ ಪರೀಕ್ಷೆ ಹಂತಕ್ಕೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಒಟ್ಟು 14 ವ್ಯಾಕ್ಸಿನ್‌ಗಳ ಪೈಕಿ 4 ಪ್ರಾಯೋಕಿಕ ಪರೀಕ್ಷೆಯ ಹಂತದಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸಿದ ಸಚಿವರು, ನಾಲ್ಕು ತಿಂಗಳೊಳಗಾಗಿ ನಾಲ್ಕು ವ್ಯಾಕ್ಸಿನ್‌ಗಳ ವೈದ್ಯಕೀಯ ಪ್ರಯೋಗದ ಹಂತಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್-19 ತಡೆಗಟ್ಟಲು ಸಂಶೋಧಿಸುತ್ತಿರುವ ವ್ಯಾಕ್ಸ್ ಯಾವ ಹಂತದಲ್ಲಿದೆ ಎಂದು ಜಿವಿಎಲ್ ರಾವ್ ಪ್ರಶ್ನೆ ಮುಂದಿಟ್ಟಾಗ ಸಚಿವರು ಈ ಹೇಳಿಕೆ ನೀಡಿದ್ದಾರೆ.
100 ವ್ಯಾಕ್ಸಿನ್‌ಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಕೈ ಜೋಡಿಸಿದೆ. ಭಾರತ ಕೂಡ ಚುರುಕಾಗಿ ತನ್ನ ಕೊಡುಗೆಯನ್ನು ನೀಡುತ್ತಿದೆ. ದೇಶದಲ್ಲಿ 14 ವ್ಯಾಕ್ಸಿನ್ ವಿವಿಧ ಹಂತಗಳಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಾಕ್ಸಿನ್ ಸಂಶೋಧನೆ ಮಾಡುತ್ತಿರುವ ಸಂಸ್ಥೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ವಿಭಾಗವು ಅನುಮತಿ, ಆರ್ಥಿಕ ಸಹಾಯ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ನನಗೆ ತಿಳಿದ ಮಟ್ಟಿಗೆ 14 ವ್ಯಾಕ್ಸಿನ್‌ಗಳ ಪೈಕಿ 4 ವ್ಯಾಕ್ಸಿನ್‌ಗಳು 4 ರಿಂದ 5 ತಿಂಗಳೊಳಗಾಗಿ ವೈದ್ಯಕೀಯ ಪ್ರಯೋಗದ ಹಂತಕ್ಕೆ ಬರಲಿವೆ ಎಂದು ಹೇಳಿದ್ದಾರೆ.
ಕೋವಿಡ್-19 ಮಹಾಮಾರಿಗೆ ವ್ಯಾಕ್ಸಿನ್ ಅಭಿವೃದ್ಧಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಅತಿ ಕಡಿಮೆ ಎಂದರೆ ವ್ಯಾಕ್ಸಿನ್ ಕಂಡುಹಿಡಿಯಲು ಕನಿಷ್ಟ 1 ವರ್ಷ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಹರ್ಷವರ್ಧನ್ ಸಲಹೆ ನೀಡಿದ್ದಾರೆ.